ನವದೆಹಲಿ: ರಿಚಾರ್ಜ್, ಡೇಟಾ ಸೇರಿದಂತೆ ಎಲ್ಲವೂ ದುಬಾರಿಯಾಗುತ್ತಿದ್ದಂತೆ ಹಲವು ಬಳಕೆದಾರರು ಇದೀಗ ಬಿಎಸ್ಎನ್‌ಎಲ್ ಸರ್ವೀಸ್ ಬಳಕೆಗೆ ಮುಂದಾಗಿದ್ದಾರೆ. ಈಗಾಗಲೇ ಮೈಕೊಡವಿಕೊಂಡು ನಿಂತಿರುವ ಬಿಎಸ್ಎನ್‌ಎಲ್ ಹಲವು ಆಫರ್ ಕೂಡ ಘೋಷಿಸಿದೆ.

ಕಡಿಮೆ ಬೆಲೆಗೆ ಡೇಟಾ, ಅನ್‌ಲಿಮಿಟೆಡ್ ಕಾಲ್ ಸೇರಿದಂತೆ ಹಲವು ಆಫರ್ ನೀಡಿದೆ. ಇತರ ನೆಟ್‌ವರ್ಕ್‌ಗಳಿಂದ ಬಿಎಸ್ಎನ್‌ಎಲ್‌ಗೆ ಪೋರ್ಟ್ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಇದೀಗ ಗ್ರಾಹಕರು ಬಿಎಸ್ಎನ್‌ಎಲ್ ನೆಟ್‌ವರ್ಕ್ ಆಯ್ಕೆ ಮಾಡಿಕೊಂಡರೆ ಸಾಕು ಕೇವಲ 10 ನಿಮಿಷದಲ್ಲಿ ನಿಮ್ಮ ಮನೆ ಬಾಗಿಲಿಗೆ ಬಿಎಸ್ಎನ್‌ಎಲ್ ಸಿಮ್ ಡೆಲಿವರಿ ಆಗಲಿದೆ.

ಇದೀಗ ಬಿಎಸ್ಎನ್‌ಎಲ್ ನೆಟ್‌ವರ್ಕ್ ಗ್ರಾಹಕರಾಗಲು ಸ್ಟೋರ್‌ಗೆ ತೆರಳಿ ಸಿಮ್ ಖರೀದಿಸಿ, ಅಗತ್ಯ ದಾಖಲೆ ಸಲ್ಲಿಕೆ ಮಾಡುವ ಚಿಂತೆ ಇಲ್ಲ. ಮನೆಯಲ್ಲೇ ಕುಳಿತು ಬಿಎಸ್ಎನ್‌ಎಲ್ ಸಿಮ್ ಆರ್ಡರ್ ಮಾಡಿದರೆ ಸಾಕು. ಬುಕ್ ಮಾಡಿದ 10 ನಿಮಿಷದಲ್ಲಿ ಮನೆ ಬಾಗಿಲಿಗೆ ಸಿಮ್ ತಲುಪಲಿದೆ. ಈ ಮೂಲಕ ಹೊಸ ಗ್ರಾಹಕರು ಹಾಗೂ ಈಗಾಗಲೇ ಬಿಎಸ್ಎನ್‌ಎಲ್ ಸಿಮ್ ಬಳಸುವ ಗ್ರಾಹಕರಿಗೆ ಸಿಮ್ ಅಪ್‌ಗ್ರೇಡ್ ಮಾಡಲು ಸಹಾಯಕಾರಿಯಾಗಿದೆ.

ಬಿಎಸ್ಎನ್‌ಎಲ್ ಅಧಿಕೃತ ವೆಬ್‌ಸೈಟ್‌ಗೆ ತೆರಳಿ ಸಿಮ್ ಖರೀದಿ(Buy Sim) ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಬಳಿಕ ದೇಶ, ಆಪರೇಟರ್ ಅಂದರೆ ಭಾರತ ಹಾಗೂ ಆಪರೇಟರ್ ಬಿಎಸ್ಎನ್‌ಎಲ್ ಎಂದು ಆಯ್ಕೆ ಮಾಡಿಕೊಳ್ಳಬೇಕು. ನಿಮಗೆ ಇಷ್ಟವಾಗುವ ಪ್ಲಾನ್ ಆಯ್ಕೆ ಮಾಡಿಕೊಳ್ಳಬೇಕು. ಹೆಸರು, ವಿಳಾಸ, ಮೊಬೈಲ್ ನಂಬರ್ ಸೇರಿದಂತೆ ಇತರ ಮಾಹಿತಿ ದಾಖಲಿಸಬೇಕು. ಈ ವೇಳೆ ಒಟಿಪಿ ಬರಲಿದೆ. ಒಟಿಪಿ ನಮೂದಿಸಿ ವೆರಿಫಿಕೇಶನ್ ಪ್ರಕ್ರಿಯೆ ಮುಗಿದ 10 ನಿಮಿಷದಲ್ಲಿ ನಿಮ್ಮ ಮನೆ ಬಾಗಿಲಿಗಿ ಸಿಮ್ ಡೆಲಿವರಿ ಆಗಲಿದೆ.

ಬಿಎಸ್ಎನ್‌ಎಲ್ ಈಗಾಗಲೇ ನೆಟ್‌ವರ್ಕ್ ವಿಸ್ತರಿಸುವ ಕಾರ್ಯದಲ್ಲಿದೆ. ಅಕ್ಟೋಬರ್ ಅಂತ್ಯದೊಳಗೆ 80,000 ಟವರ್ ಹಾಗೂ 2025ರ ಮಾರ್ಚ್ ಒಳಗೆ 21,000 ಟವರ್ ಸ್ಥಾಪಿಸಲಾಗುತ್ತಿದೆ. ಸದ್ಯ 4ಜಿ ನೆಟ್‌ವರ್ಕ್ ದೇಶದ ಉದ್ದಗಲಕ್ಕೂ ವಿಸ್ತರಿಸಿರುವ ಬಿಎಸ್ಎನ್‌ಎಲ್ ಮುಂದಿನ ವರ್ಷದಲ್ಲಿ 5ಜಿ ಸರ್ವೀಸ್ ಲಾಂಚ್ ಮಾಡುತ್ತಿದೆ.

ರಿಲಯನ್ಸ್ ಜಿಯೋ, ಏರ್‌ಟೆಲ್, ವಿಐ ನೆಟ್‌ವರ್ಕ್‌ಗೆ ಠಕ್ಕರ್ ನೀಡುತ್ತಿರುವ ಬಿಎಸ್ಎನ್‌ಎಲ್ ರೀಚಾರ್ಜ್‌ನಲ್ಲೂ ಹಲವು ಆಫರ್ ನೀಡಿದೆ. ಬಿಎಸ್ಎನ್‌ಎಲ್ ಕ್ಷಿಪ್ರ ಕ್ರಾಂತಿಯಿಂದ ಪ್ರತಿಸ್ಪರ್ಧಿಗಳ ಮೇಲಿನ ಒತ್ತಡ ಹೆಚ್ಚಾಗಿದೆ. ಇಷ್ಟೇ ಅಲ್ಲ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.