ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ ಸರಿಸುಮಾರು 200 ಪ್ರತಿನಿಧಿಗಳು, ತಮ್ಮ ಪ್ರತಿಭೆಯ ಪ್ರಸ್ತುತಿಯೊಂದಿಗೆ ಸಹಬಾಳ್ವೆ ನಡೆಸಿ ಏಕತೆಯ ಅರಿವನ್ನು ಪಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಹೇಳಿದರು.
ಅವರು ಡಿ.23 ರಂದು ಮಂಗಳೂರು ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದಲ್ಲಿ ರಾಜ್ಯ ಎನ್.ಎಸ್.ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಎನ್.ಎಸ್.ಎಸ್ ಘಟಕ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಂಸ್ಕೃತಿಕ ವಿನಿಮಯ, ಪರಿಸರದ ಅಧ್ಯಯನ, ಏಳಿಗೆಯ ಚಿಂತನ-ಮಂಥನ, ದೈಹಿಕ ಆರೋಗ್ಯ, ಬೌಧಿಕ ವಿಕಾಸ ಈ ಶಿಬಿರದ ಫಲಶ್ರುತಿ. ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯ, ಸಂಯೋಜಕರ ಕಾರ್ಯವೈಖರಿ ಶ್ಲಾಘನೀಯ ಎಂದರು.
ಯೆನೆಪೋಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ. ವಿಜಯ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಬಿರದ ಯಶಸ್ವಿಗೆ ಕಾರಣರಾದ ಸರ್ವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ಯೆನೆಪೋಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ಕೆ.ಎಸ್.ಗಂಗಾಧರ ಸೋಮಯಾಜಿ ಉಪಸ್ಥಿತರಿದ್ದರು.
ಕಾರ್ಯಕ್ರದ ಸಂಯೋಜಕಿ ಡಾ. ಅಶ್ವಿನಿ ಶೆಟ್ಟಿ ಏಳು ದಿನಗಳಲ್ಲಿ ನಡೆದ ಶಿಬಿರದ ಕಾರ್ಯಕ್ರಮಗಳ ವರದಿ ವಾಚಿಸಿದರು.
ಅಂತಿಮವಾಗಿ ಕರ್ನಾಟಕ, ಗೋವಾ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಗುಜರಾತ್ನಿಂದ ಭಾಗವಹಿಸಿದ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.
ಮನೀಷ್ ಸ್ವಾಗತಿಸಿ, ಪವಿತ್ರ ಶೆಟ್ಟಿ ವಂದಿಸಿದರು. ಅವರಿಲ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.