ಮಂಗಳೂರು: ಹೃದಯದ ಸಮಸ್ಯೆಯೊಂದಿಗೆ ಲೋವರ್ ಸೆಗ್ಮೆಂಟ್ ಸಿಸೇರಿಯನ್ ಮೂಲಕ ಜನಿಸಿದ ಶಿಶುವಿಗೆ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಬಲೂನ್ ಪಲ್ಮೊನರಿ ವಾಲ್ವುಲೊಪ್ಲಾಸ್ಟಿ (ಬಿಪಿವಿ) ವಿಧಾನದ ಮೂಲಕ ಚಿಕಿತ್ಸೆ ನೀಡಿ ಕಾಯಿಲೆ ಗುಣಪಡಿಸಲಾಗಿದೆ.

ಆಸ್ಪತ್ರೆಯ ಪೀಡಿಯಾಟ್ರಿಕ್ ಕಾರ್ಡಿಯೊಲಾಜಿಸ್ಟ್ ಡಾ. ಪ್ರೇಮ್ ಆಳ್ವ ಅವರ ನೇತೃಯತ್ವದಲ್ಲಿ ವೈದ್ಯರ ತಂಡ ಈ ಸಾಧನೆ ಮಾಡಿದೆ.

ಗರ್ಭಾವಸ್ಥೆಯಲ್ಲೇ ಮಗುವಿಗೆ ಹೃದಯ ರೋಗ ಇರುವುದು ಪತ್ತೆಯಾಗಿದ್ದರಿಂದ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಡಾ. ಆರ್ಥಿಕಾ ಶೆಟ್ಟಿ ಅವರು ಸಿಸೇರಿಯನ್ ವಿಧಾನದ ಮೂಲಕ ಸುರಕ್ಷಿತವಾಗಿ ಹೆರಿಗೆ ನಡೆಸಿದರು.

ಶಿಶುವೈದ್ಯ ಡಾ. ಶ್ರೀಕೃಷ್ಣ ಜಿ.ಎನ್. ಅವರು ಮಗುವಿನ ಆರಂಭಿಕ ಆರೈಕೆಯ ಹೊಣೆ ನಿರ್ವಹಿಸಿದರು.

ಬಳಿಕ ಬಿಪಿವಿ ವಿಧಾನದ ಮೂಲಕ ಡಾ. ಪ್ರೇಮ್ ಆಳ್ವ ಅವರು ಚಿಕಿತ್ಸೆ ನೀಡಿದರು. ಆ ಮೂಲಕ ಶಿಶುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವನ್ನು ತಪ್ಪಿಸಲಾಯಿತು.

ಅರಿವಳಿಕೆ ತಜ್ಞ ಡಾ. ಸುಹಾಸ್ ಹಾಗೂ ಇಂಟೆನ್ಸಿವಿಸ್ಟ್ ಡಾ. ಅಕ್ಷತಾ ಶೆಟ್ಟಿ ತಂಡದಲ್ಲಿದ್ದರು. ಚಿಕಿತ್ಸೆಯ ಬಳಿಕ ಮಗು ಉತ್ತಮ ಚೇತರಿಕೆ ಕಾಣುತ್ತಿದೆ ಎಂದು ವೈದ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.