ಕರ್ನಾಟಕ ಸರಕಾರವು ಶುಚಿ ಕಾರ್ಯಕ್ರಮದಡಿ ಹದಿಹರೆಯದ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಈಗಾಗಲೇ ನೀಡುತ್ತಿದ್ದು, ಈ ಯೋಜನೆಯ ಮುಂದುವರೆದ ಭಾಗವಾಗಿ ಇಂದಿನಿಂದ ಮುಟ್ಟಿನ ಬಟ್ಟಲು ಅಥವಾ ಮುಟ್ಟಿನ ಕಪ್‌ ಎಂದು ಕರೆಯಲ್ಪಡುವ ಮೆನ್ಸ್‌ಟ್ರುಯೆಲ್‌ ಕಪ್‌(Menstrual Cup)ಗಳನ್ನು ನೀಡಲಿದೆ.

ಮುಟ್ಟಿನ ಕಪ್‌ ನೀಡುವ ಯೋಜನೆಗೆ ಇಂದು ಚಾಮರಾಜನಗರ ಜಿಲ್ಲೆಯಲ್ಲಿ ಚಾಲನೆ ನೀಡಲಾಗುತ್ತದೆ. ಈ ಉತ್ಪನ್ನವನ್ನು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ೨೦೨೨-೨೩ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಇದೀಗ ಈ ಯೋಜನೆಯ ಅನುಷ್ಠಾನಕ್ಕೆ ಸರಕಾರ ಮುಂದಾಗಿದೆ.

ಮೈತ್ರಿ ಮುಟ್ಟಿನ ಕಪ್‌ ಯೋಜನೆಯು ಈಗ ಪ್ರಾಯೋಗಿಕವಾಗಿ ಆರಂಭಗೊಳ್ಳಲಿದೆ. ಆರಂಭದಲ್ಲಿ ಚಾಮರಾಜನಗರ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಹದಿಹರೆಯದ ಹೆಣ್ಣುಮಕ್ಕಳಿಗೆ ಮುಟ್ಟಿನ ಕಪ್‌ ಬಳಕೆಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮವೂ ಆಗಬೇಕಿದೆ. ಈ ಯೋಜನೆಯ ಫಲಿತಾಂಶವನ್ನು ಅವಲೋಕಿಸಿ ಮುಂದಿನ ಹಂತದಲ್ಲಿ ಇತರೆ ಜಿಲ್ಲೆಗಳಿಗೂ ಮುಟ್ಟಿನ ಕಪ್‌ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಸರಕಾರ ಮಾಹಿತಿ ನೀಡಿದೆ.

ವಿಶೇಷವೆಂದರೆ ಹದಿಹರೆಯದ ಹೆಣ್ಣುಮಕ್ಕಳ ನೈರ್ಮಲ್ಯಕ್ಕಾಗಿ ಇಂತಹ ಯೋಜನೆಯನ್ನು ಪರಿಚಯಿಸಿದ ಮೊದಲ ರಾಜ್ಯವೆಂಬ ಹೆಮ್ಮೆಗೆ ಕರ್ನಾಟಕ ಪಾತ್ರವಾಗಲಿದೆ. ಮೊದಲ ಹಂತದಲ್ಲಿ ಈ ಯೋಜನೆಯ ಲಾಭವನ್ನು ಸುಮಾರು ೧೦ ಸಾವಿರ ಫಲಾನುಭವಿಗಳು ಪಡೆಯಲಿದ್ದಾರೆ.

ಯಾರಿಗೆ ದೊರಕಲಿದೆ ಮುಟ್ಟಿನ ಕಪ್‌?

ಆರಂಭಿಕವಾಗಿ ಚಾಮರಾಜನಗರ ಜಿಲ್ಲೆಯ, ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಮತ್ತು ಮುಂದಿನ ಹಂತದಲ್ಲಿ ರಾಜ್ಯದ ಇತರೆ ಜಿಲ್ಲೆಗಳ ಫಲಾನುಭವಿಗಳಿಗೆ ಮುಟ್ಟಿನ ಕಪ್‌ ನೀಡಲಾಗುತ್ತದೆ. ಸರಕಾರಿ ಮತ್ತು ಅನುದಾನಿತ ಕಾಲೇಜುಗಳ ಹದಿನಾರರಿಂದ ಹದಿನೆಂಟು ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ಈ ಮುಟ್ಟಿನ ಕಪ್‌ ದೊರಕಲಿದೆ. ೧೬-೧೮ ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಗೆ ಮಾತ್ರ ಏಕೆ, ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೂ ನೀಡಬಹುದಲ್ಲವೇ ಎಂಬ ಪ್ರಶ್ನೆಯೂ ಜನರಲ್ಲಿದೆ.

ಪ್ರತಿವರ್ಷ 2.23 ಕೋಟಿ ನ್ಯಾಪ್‌ಕಿನ್‌ ವಿತರಣೆ

ಕರ್ನಾಟಕ ಸರಕಾರವು ಶುಚಿ ಕಾರ್ಯಕ್ರಮ ಯೋಜನೆಯಡಿ ಪ್ರತಿವರ್ಷ ಹಲವು ಕೋಟಿ ನ್ಯಾಪ್‌ಕಿನ್‌ಗಳನ್ನು ವಿತರಣೆ ಮಾಡುತ್ತಿದೆ. ರಾಜ್ಯಾದ್ಯಂತ ಸುಮಾರು ೧೯ ಲಕ್ಷ ಹದಿಹರೆಯದ ಹೆಣ್ಣುಮಕ್ಕಳಿಗೆ ಪ್ರತಿವರ್ಷ ೨.೨೩ ಕೋಟಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ವಿತರಿಸಲಾಗುತ್ತದೆ.

ಏನಿದು ಮುಟ್ಟಿನ ಕಪ್‌?

ಸ್ತ್ರೀಯರು ತಿಂಗಳ ಮುಟ್ಟಿನ ಸಮಯದಲ್ಲಿ ಬಳಸಬಹುದಾದ ಒಂದು ಪ್ರಾಡಕ್ಟ್‌. ತಿಂಗಳ ಮುಟ್ಟಿನ ಸಮಯದಲ್ಲಿ ರಕ್ತವು ಹೊರಗೆ ಸ್ರವಿಸಿ ಬಟ್ಟೆ ಕಳೆಯಾಗಬಾರದು ಎನ್ನುವ ಕಾರಣಕ್ಕೆ ಮತ್ತು ಮುಟ್ಟಿನ ಸಮಯದಲ್ಲಿ ಯಾವುದೇ ಕೆಲಸಕ್ಕೂ ಅಡ್ಡಿಯಾಗಬಾರದು ಎಂದು ಇದನ್ನು ಬಳಸಲಾಗುತ್ತದೆ. ಸ್ಯಾನಿಟರಿ ಪ್ಯಾಡ್‌, ಟ್ಯಾಂಪೂನ್‌ ಇತ್ಯಾದಿಗಳಷ್ಟು ಮುಟ್ಟಿನ ಕಪ್‌ ಜನಪ್ರಿಯವಲ್ಲ. ಜನರಿಗೆ ಮುಟ್ಟಿನ ಕಪ್‌ ಅಥವಾ ಮುಟ್ಟಿನ ಬಟ್ಟಲಿನ ಕುರಿತು ತಿಳಿವಳಿಕೆಯ ಕೊರತೆಯೂ ಇದೆ ಎಂದು ತಜ್ಞರು ಹೇಳಿದ್ದಾರೆ. ಯೋನಿಯೊಳಗೆ ಇಡುವ ಉತ್ಪನ್ನ ಇದಾಗಿರುವುದರಿಂದ ಬಹುತೇಕರಿಗೆ ಇದರ ಕುರಿತು ಅನಗತ್ಯ ಆತಂಕವೂ ಇದೆ. ಇತ್ತೀಚಿನ ವರ್ಷಗಳಲ್ಲಿ ಇದರ ಪ್ರಯೋಜನಗಳ ಕುರಿತು ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡುತ್ತಿದ್ದು, ಮುಟ್ಟಿನ ಬಟ್ಟಲು ಅಥವಾ ಮುಟ್ಟಿನ ಕಪ್‌ ಬಳಸಲು ಮುಂದಾಗುತ್ತಿದ್ದಾರೆ.

ಮುಟ್ಟಿನ ಕಪ್‌ ಬಳಸುವುದು ಹೇಗೆ?

ಮಾಸಿಕ ಋತುಸ್ರಾವದ ಸಮಯದಲ್ಲಿ ಮುಟ್ಟಿನ ಕಪ್‌ ಅಥವಾ ಮುಟ್ಟಿನ ಬಟ್ಟಲು ಬಳಸಬೇಕು. ಮುಟ್ಟಿನ ಕಪ್‌ ಮೃದುವಾಗಿರುತ್ತದೆ. ಇದನ್ನು ಇಂಗ್ಲಿಷ್‌ ಅಕ್ಷರದ ಸಿ ಆಕಾರದಲ್ಲಿ ಮಡುವಿ ಯೋನಿಯೊಳಗೆ ತೂರಿಸಬೇಕು ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಈ ಮೃದುವಾದ ಮುಟ್ಟಿನ ಕಪ್‌ ಅನ್ನು ಯೋನಿಯೊಳಗೆ ಸೇರಿಸಿದ ಬಳಿಕ ಅಲ್ಲಿ ನಿರ್ವಾತ ಸೃಷ್ಟಿಯಾಗಿ ಯೋನಿಯ ಆಕಾರಕ್ಕೆ ತಕ್ಕಂತೆ ಮುಟ್ಟಿನ ಕಪ್‌ ಅಗಲಗೊಳ್ಳುತ್ತದೆ ಅಥವಾ ತೆರೆದುಕೊಳ್ಳುತ್ತದೆ. ಮುಟ್ಟಿನ ಸಮಯದ ರಕ್ತಸ್ರಾವ ಈ ಕಪ್‌ನೊಳಗೆ ಶೇಖರಣೆಗೊಳ್ಳುತ್ತದೆ.

ಕಡಿಮೆ ರಕ್ತಸ್ರಾವವಿದ್ದ ದಿನಗಳಲ್ಲಿ ಎಂಟರಿಂದ ಹನ್ನೆರಡು ಗಂಟೆಗಳ ಕಾಲ ಈ ಮುಟ್ಟಿನ ಬಟ್ಟಲನ್ನು ತೆಗೆಯಬೇಕಿಲ್ಲ. ಎಲ್ಲಾದರೂ ರಕ್ತಸ್ರಾವ ಹೆಚ್ಚಿದ್ದರೆ ನಾಲ್ಕರಿಂದ ಎಂಟು ಗಂಟೆಯೊಳಗೆ ತೆಗೆದು ಅದನ್ನು ಶುಚಿಗೊಳಿಸಿ ಮತ್ತೆ ಧರಿಸಬೇಕು. ಮುಟ್ಟಿನ ಬಟ್ಟಲು ಧರಿಸುವ ಮೊದಲು ಮತ್ತು ಮುಟ್ಟಿನ ಬಟ್ಟಲನ್ನು ಯೋನಿಯಿಂದ ಹೊರಕ್ಕೆ ತೆಗೆಯುವ ಸಂದರ್ಭದಲ್ಲಿ ಕೈಗಳು ಶುಚಿಯಾಗಿರಬೇಕು. ಮುಟ್ಟಿನ ಬಟ್ಟಲು ಧರಿಸುವ ಮೊದಲು ಆ ಕಪ್‌ ಅನ್ನು ಶುಭ್ರವಾಗಿ ನೀರಿನಲ್ಲಿ ತೊಳೆದುಕೊಳ್ಳಬೇಕು ಎಂದು ಸ್ತ್ರೀರೋಗ ತಜ್ಞರು ಸಲಹೆ ನೀಡಿದ್ದಾರೆ.

ಮುಟ್ಟಿನ ಕಪ್‌ ಅನ್ನು ಮುಂದಿನ ತಿಂಗಳು ಮತ್ತೆ ಮರುಬಳಕೆ ಮಾಡಬಹುದು. ಒಮ್ಮೆ ಬಳಸಿದ ಬಳಿಕ ಅದನ್ನು ಕುದಿಯುವ ನೀರಿನಲ್ಲಿ ಹಾಕಿ ಒರೆಸಿ ಇಡಬೇಕು. ಮುಂದಿನ ತಿಂಗಳು ಮತ್ತೆ ಬಿಸಿನೀರಿನಲ್ಲಿ ತೊಳೆದು ಒರೆಸಿ ಮತ್ತೆ ಬಳಸಬಹುದು. ಈಗಿನ ಯೂಟ್ಯೂಬ್‌ ವಿಡಿಯೋಗಳ ಯುಗದಲ್ಲಿ ಮುಟ್ಟಿನ ಕಪ್‌ ಧರಿಸುವುದು ಹೇಗೆ ಎನ್ನುವ ಕುರಿತು ಸಾಕಷ್ಟು ರೇಖಾಚಿತ್ರಗಳಿರುವ ವಿಡಿಯೋಗಳು ಲಭ್ಯವಿದ್ದು, ಅಂತಹ ವಿಡಿಯೋಗಳನ್ನು ನೋಡಿ ಬಳಸುವುದನ್ನು ಕಲಿಯಬಹುದು.