ಹಾಸನ/ಮಂಗಳೂರು: ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರಿದ ಕಾರಣ ವಿವಿಧ ಜಿಲ್ಲೆಗಳಲ್ಲಿ ಅವಾಂತರಗಳು ಮುಂದುವರಿದಿವೆ. ಹಾಸನ-ಚಿಕ್ಕಮಗಳೂರಿನ ಘಾಟ್ ಪ್ರದೇಶದಲ್ಲಿ ಭಾರೀ ಭೂಕುಸಿತಗಳು ಸಂಭವಿಸಿವೆ.

ಶಿರಾಡಿ ಘಾಟ್‌ನಲ್ಲಿ ಭೂಕುಸಿತ – ತಪ್ಪಿದ ಭಾರೀ ಅನಾಹುತ

ಸಕಲೇಶಪುರದ ದೊಡ್ಡತಪ್ಲು ಬಳಿಯ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಈ ಸಂದರ್ಭದಲ್ಲಿ ಹಾದುಹೋಗ್ತಿದ್ದ ಎರಡು ಕಾರು, ಗ್ಯಾಸ್ ಟ್ಯಾಂಕರ್ , ಲಾರಿ ಸೇರಿ ಆರು ವಾಹನಗಳ ಮೇಲೆ ಗುಡ್ಡ ಕುಸಿದು ಅನಾಹುತ ಸಂಭವಿಸಿದೆ. ಮಣ್ಣು ಬಿದ್ದಿರುವ ಧಾಟಿಗೆ ಗ್ಯಾಸ್ ಟ್ಯಾಂಕರ್ ಮತ್ತು ಲಾರಿ ಪಲ್ಟಿ ಹೊಡೆದಿವೆ. ಅದೃಷ್ಟವಶಾತ್ ವಾಹನಗಳಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗ್ಯಾಸ್ ಟ್ಯಾಂಕರ್ ಪಲ್ಟಿ ಹೊಡೆದ ಪರಿಣಾಮ ಗ್ಯಾಸ್ ಸೋರಿಕೆ ಭೀತಿ ಎದುರಾಗಿದೆ. ಭಾರೀ ಮಳೆ ನಡುವೆಯೇ ಮಣ್ಣು ತೆರವು ಕಾರ್ಯ ನಡೆದಿದೆ. ಇದೇ ವೇಳೆ, ಎತ್ತಿನಹೊಳೆ ಯೋಜನೆ ಕಾಮಗಾರಿಯ ಪರಿಣಾಮ ಸಕಲೇಶಪುರದ ಕುಂಬರಡಿ-ಹಾರ್ಲೆ ಎಸ್ಟೇಟ್ ನಡುವೆ ಗುಡ್ಡ ಕುಸಿದು ಸುಮಾರು 200 ಅಡಿಯಷ್ಟು ದೂರದವರೆಗೂ ರಸ್ತೆಯೇ ಕತ್ತರಿಸಿಹೋಗಿದೆ. ಇಲ್ಲಿ ರಸ್ತೆಯೇ ಕಾಣುತ್ತಿಲ್ಲ. ಇದರಿಂದ ಬಾರ್ಲಿ-ಮಲ್ಲಗದ್ದೆ-ಕಾಡುಮನೆ ಸೇರಿ ಸುಮಾರು 10 ಗ್ರಾಮಗಳಿಗೆ ಸಂಪರ್ಕವೇ ಇಲ್ಲವಾಗಿದೆ.

. ಭಾರೀ ಮಳೆ ನಡುವೆಯೇ ಮಣ್ಣು ತೆರವು ಕಾರ್ಯ ನಡೆದಿದೆ.

ಈ ರಸ್ತೆ ಸಮೀಪವೇ ಎತ್ತಿನಹೊಳೆ ಯೋಜನೆ ಹಾದುಹೋಗಿದೆ. ದುರಂತಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ ಎಂಬ ಆರೋಪ ಕೇಳಿಬಂದಿದೆ. ಇವೆಲ್ಲವುಗಳ ಪರಿಣಾಮ ಶಿರಾಡಿಘಾಟ್‌ನಲ್ಲಿ ಎರಡು ಬದಿಯ ರಸ್ತೆ ಸಂಚಾರ ಬಂದ್ ಆಗಿದೆ. ನೂರಾರು ವಾಹನಗಳು ನಡುರಸ್ತೆಯಲ್ಲಿ ಸಿಲುಕಿ ಸವಾರರು ಪರದಾಡುತ್ತಿದ್ದಾರೆ.

ಮಂಗಳೂರು ಉಪ್ಪಿನಂಗಡಿ ಮಾರ್ಗ ಸಂಪೂರ್ಣ ಬಂದ್:
ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಪರಿಣಾಮ ಸರಳಿಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಡ್ಡ ಕುಸಿದು ಅಜಿಲಮೊಗರು – ಸರಳಿಕಟ್ಟೆ – ಉಪ್ಪಿನಂಗಡಿ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಪಂಜುಕ್ಕು ಪ್ರಯಾಣಿಕರ ತಂಗುದಾಣದ ಬಳಿಯೇ ಘಟನೆ ನಡೆದಿದೆ. ಸದ್ಯ ಬಸ್‌ಗೆ ಯಾವುದೇ ಹಾನಿಯಾಗಿಲ್ಲ. ಗುಡ್ಡ ಕುಸಿತದಿಂದ ವಿದ್ಯುತ್ ಕಂಬಗಳು ಧರೆಗುಳಿದಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಾಗಾಗಿ ಉಪ್ಪಿನಂಗಡಿ, ಪುತ್ತೂರು, ಬಿ.ಸಿರೋಡು ತೆರಳುವ ಪ್ರಯಾಣಿಕರು ಬದಲಿ ರಸ್ತೆ ಬಳಸುವಂತೆ ಜಿಲ್ಲಾಡಳಿತ ಸೂಚಿಸಿದೆ.

ಕರಾವಳಿಯಲ್ಲೂ ಅವಾಂತರ:
ಕರಾವಳಿ-ಮಲೆನಾಡು ಭಾಗದಲ್ಲಿ ಮಳೆಯಾರ್ಭಟ ಜೋರಾಗಿದೆ. ಚಿಕ್ಕಮಗಳೂರಿನ ಮಹಲ್ಗೋಡು ಸೇತುವೆಗೆ ಜಲಬೇಲಿ ಹಾಕಿದೆ. ಬಾಳೆಹೊನ್ನೂರು-ಕಳಸ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಬಾಳೆಹೊನ್ನೂರಲ್ಲಿ ಪ್ರವಾಹದಲ್ಲಿ ಸಿಲುಕಿ ಪರದಾಡುತ್ತಿದ್ದ ಜನರನ್ನು ಬೋಟ್ ಮೂಲಕ ರಕ್ಷಿಸಲಾಗಿದೆ. ಶೃಂಗೇರಿಯ ನೆಮ್ಮಾರು ಬಳಿ ರಸ್ತೆ ಮೇಲೆಯೇ ಅಪಾರ ನೀರು ಹರಿಯುತ್ತಿದ್ದು, ಶೃಂಗೇರಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಮಾಡಲಾಗಿದೆ.

ಶೃಂಗೇರಿ ಪಟ್ಟಣ ಮತ್ತೆ ಜಲಾವೃತವಾಗಿದೆ. ಚಾರ್ಮಾಡಿ ಘಾಟ್‌ನಲ್ಲಿ ಬೃಹತ್ ಮರವೊಂದು ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಕೊಟ್ಟಿಗೆಹಾರದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಕಾವೇರಿ ಅಬ್ಬರಕ್ಕೆ ಭಾಗಮಂಡಲ ರಸ್ತೆಗಳು, ಹೆಮ್ಮಾಡು ಗ್ರಾಮ ಜಲಾವೃತವಾಗಿದೆ. ತ್ರಿವೇಣಿ ಸಂಗಮ ತುಂಬಿ ಭಗಂಡೇಶ್ವರ ಸನ್ನಿಧಿಯ ಮೆಟ್ಟಿಲುವರೆಗೆ ನೀರು ಆವರಿಸಿದೆ. ನಾಪೋಕ್ಲು ರಸ್ತೆ ಮತ್ತು ಮಡಿಕೇರಿ ರಸ್ತೆ ಮುಳುಗಡೆಯಾಗಿದೆ. ವಿರಾಜಪೇಟೆಯ ಕಾಕೋಟು-ಪರಂಬಿಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 6 ಮಂದಿಯನ್ನು ರಕ್ಷಿಸಲಾಗಿದೆ. ಗಡಿಭಾಗದ ಪೆರಾಜೆಯಲ್ಲಿ ಅಡಿಕೆತೋಟದ ಮೇಲೆ ಗುಡ್ಡ ಕುಸಿದಿದೆ.

ದಕ್ಷಿಣ ಕನ್ನಡದಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿದೆ. ಉಪ್ಪಿನಂಗಡಿಯಲ್ಲಿ ಬಸ್ ನಿಲ್ದಾಣದ ಬಳಿಯೇ ಗುಡ್ಡ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಉಡುಪಿಯ ಮಣಿಪುರ ಸಮೀಪದ ಕಿಂಡಿ ಅಣೆಕಟ್ಟಿನಲ್ಲಿ ದೋಣಿ ಸಿಲುಕಿದೆ. ಬೇಲೂರಿನ ಬಿರಡಳ್ಳಿ ಬಳಿ ಸೇತುವೆ ಮುಳುಗಡೆಯಾಗಿದೆ. ಸುಳ್ಳಕ್ಕಿಯಲ್ಲಿ ರಸ್ತೆಯೇ ಕೊಚ್ಚಿ ಹೋಗಿದೆ. ಆಲೂರಿನ ಮುತ್ತಿಗೆ ಬಳಿ ರಸ್ತೆ ಮೇಲೆ ಭಾರೀ ಪ್ರಮಾಣದಲ್ಲಿ ನೀರು ಹರೀತಿದೆ. ನೂರಾರು ಎಕರೆ ಜಮೀನು ಜಲಾವೃತವಾಗಿದೆ.