ಬಂಟ್ವಾಳ : ಭೂ ಅಭಿವೃದ್ದಿ ಬ್ಯಾಂಕ್ 2023-24ನೇ ಸಾಲಿನಲ್ಲಿ ಸಾರ್ವಕಾಲಿಕ ದಾಖಲೆ ಮೊತ್ತದ ರೂ. 1.05 ಕೋಟಿ ಲಾಭವನ್ನು ಪಡೆದಿದೆ. ತನ್ನ ಸದಸ್ಯ ರೈತರಿಗೆ ಶೇ. 11 ಡಿವಿಡೆಂಟ್ ನೀಡುವುದಾಗಿ ಅಧ್ಯಕ್ಷ ಅರುಣ್ ರೋಶನ್ ಡಿ’ಸೋಜ, ಪ್ರಕಟಿಸಿದ್ದಾರೆ. ಅವರು ಸೆ. 6 ರಂದು ಬ್ಯಾಂಕಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬಂಟ್ವಾಳ ತಾಲೂಕಿನ 84 ಗ್ರಾಮಗಳ ವ್ಯಾಪ್ತಿಯಲ್ಲಿರುವ ಕೃಷಿಕರ ಸೇವೆಯ ಧ್ಯೇಯಯನ್ನು ಇಟ್ಟುಕೊಂಡು 1962ರಲ್ಲಿ ಸ್ಥಾಪನೆಗೊಂಡ ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿ. ರೈತರಿಗೆ ದೀರ್ಘಾವಧಿ ಮತ್ತು ಮಧ್ಯಮಾವಧಿ ಸಾಲವನ್ನು ನೀಡುತ್ತಿದೆ.
ಪ್ರಸ್ತುತ 11,303 ಸದಸ್ಯರನ್ನು ಹೊಂದಿದ್ದು ರೂ. 178.50ಲಕ್ಷ ಪಾಲು ಬಂಡವಾಳವನ್ನು, ರೂ.1974 .96ಲಕ್ಷ ಠೇವಣಿಯನ್ನು, ರೂ. 37.36 ಲಕ್ಷ ಕ್ಷೇಮನಿಧಿಯನ್ನು, ರೂ. 146.66ಲಕ್ಷ ಇತರ ನಿಧಿಯನ್ನು ಹೊಂದಿದೆ.
2023-24ನೇ ಸಾಲಿನಲ್ಲಿ ವಿವಿಧ ಯೋಜನೆಯಡಿ ರೂ. 1162.52ಲಕ್ಷ ಸಾಲ ವಿತರಿಸಿದೆ, ನಬಾರ್ಡ್ ಯೋಜನೆಯಲ್ಲಿ 436 ಸದಸ್ಯರಿಗೆ ರೂ. 301.68ಲಕ್ಷ ಕೃಷಿ ಸಾಲ ಸ್ವಂತ ಬಂಡವಾಳದಲ್ಲಿ610 ಸದಸ್ಯರಿಗೆ ರೂ. 860.84 ಲಕ್ಷ ಸಾಲ ವಿತರಿಸಿದೆ.
2023-24ನೇ ಸಾಲಿನಲ್ಲಿ ಶೇ. 94 ಸಾಲ ವಸೂಲಾತಿ ಸಾಧನೆಯಾಗಿದ್ದು ಸಾಲ ವಸೂಲಾತಿಯಲ್ಲಿ ದ.ಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.
ನಾವು ಆಡಳಿತಕ್ಕೆ ಬಂದಾಗ ರೂ. 6.5ಕೋಟಿ ಹೊರ ಬಾಕಿ ಸಾಲ ಇದ್ದುದನ್ನು ವಸೂಲಾತಿ ಬಳಿಕ ರೂ. 3.5 ಕೋಟಿಗೆ ಇಳಿಸಲಾಗಿದೆ. ಹಿಂದಿನ ನಷ್ಟ ರೂ. 1.5 ಕೋಟಿಯನ್ನು ಭರ್ತಿಮಾಡಿ ಹೆಚ್ಚುವರಿ ರೂ. 64 ಲಕ್ಷ ಲಾಭದಲ್ಲಿರುವುದಾಗಿ ತಿಳಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಸ್ವಂತ ಕಟ್ಟಡ ಹೊಂದಿದೆ. ಮಾಣಿಯಲ್ಲಿ ಶಾಖೆಯನ್ನು ತೆರೆದಿದೆ. ಬಿ.ಸಿ.ರೋಡಿನ ಕಟ್ಟಡದಲ್ಲಿ ವಿವಿಧ ಬ್ಯಾಂಕ್‌ಗಳ ಕಚೇರಿಗಳು, ವಾಣಿಜ್ಯ ತೆರಿಗೆ ಕಚೇರಿ, ಸುದ್ದಿ ಸೆಂಟರ್, ಬಿ.ಸಿ.ರೋಡ್ -1ಸೇವಾ ಕೇಂದ್ರ ಬಾಡಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸರಕಾರ ಘೋಷಿಸಿದ ಶೇ. 3 ಬಡ್ಡಿದರದ ಕೃಷಿ ಸಾಲ, ನೀರಾವರಿ, ತೋಟಗಾರಿಕೆ, ಹೈನುಗಾರಿಕೆ, ಕೋಳಿಸಾಕಾಣಿಕೆ, ಕೃಷಿ ಯಾಂತ್ರೀಕರಣ, ಗೋಬರ್ ಅನಿಲ ಸ್ಥಾವರ ಸಹಿತ ಇತರ ಉದ್ದೇಶಕ್ಕೆ ಸಾಲವನ್ನು ನೀಡಲಾಗುತ್ತಿದೆ. 2024.25ರ ಸಾಲಿನಲ್ಲಿ ರೂ. 15 ಕೋಟಿ ಸಾಲ ವಿತರಣೆಯ ಗುರಿಯನ್ನು ಹೊಂದಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷ ಚಂದ್ರಶೇಖರ ಬಂಗೇರ, ನಿರ್ದೇಶಕರಾದ ಲಿಂಗಪ್ಪ ಪೂಜಾರಿ, ಲೋಲಾಕ್ಷಿ, ವಿಜಯಾನಂದ, ಸುಂದರ ಪೂಜಾರಿ, ವ್ಯವಸ್ಥಾಪಕ ಪದ್ಮನಾಭ ಜಿ. ಉಪಸ್ಥಿತರಿದ್ದರು.