ಶಿಕ್ಷಕರು ವಿದ್ಯಾರ್ಥಿಗಳನ್ನು ಶಾಲಾ ಸ್ವಚ್ಚತೆಗೆ ಬಳಸಿಕೊಳ್ಳುವುದರ ಬಗ್ಗೆ ಪರವಿರೋಧ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಸೂಕ್ತ ವ್ಯವಸ್ಥೆಯನ್ನು ಮಾಡಲು ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಸಂತೋಷ್ ಕುಮಾರ್ ಬಾಳ್ತಿಲ ಹೇಳಿದರು.

ಅವರು ಡಿ.30 ರಂದು ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಗಾಗಿ ಏರ್ಪಡಿಸಿದ ಸಮಾಲೋಚನಾ ಸಭೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಾಣಿ ವಲಯ ಸಿ.ಆರ್.ಪಿ ಸತೀಶ ರಾವ್ ಕಾರ್ಯಕ್ರಮ ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ತರಬೇತುದಾರ ಜಯಾನಂದ ಪೆರಾಜೆ ಮಾತನಾಡಿ ಶಿಕ್ಷಕರು ಸ್ವ ಮೌಲ್ಯಮಾಪನ ಮಾಡಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಮೇಲ್ಪಂಕ್ತಿಯಾಗಬೇಕು ಎಂದು ತಿಳಿಸಿದರು.

ಗ್ರಾ.ಪಂ ಅಧ್ಯಕ್ಷ ವಿಠಲ ಬಾಳ್ತಿಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗುರುಗಳು ಮಕ್ಕಳಿಗೆ ಮಾತ್ರವಲ್ಲದೆ ಸಮಾಜಕ್ಕೂ ಮಾರ್ಗದರ್ಶಕರಾಗಬೇಕೆಂದರು. ಬಂಟ್ವಾಳ ಸಿ.ಆರ್.ಪಿ ನಂದಾ ಎಸ್ತೇರ ಶುಭ ಹಾರೈಸಿದರು.

ಶಿಕ್ಷಕರಾದ ಜಯರಾಮ ಪಡ್ರೆ, ಜಯಲಕ್ಮಿ ಶೇರಾ, ಅಮೋಘ ಅನಂತಾಡಿ, ಸಚಿನ್ ಮಂಡ್ಯ ಅಭಿಪ್ರಾಯ ವ್ಯಕ್ತ ಪಡಿಸಿದರು. ಬಂಟ್ವಾಳ ನಗರ , ಬಾಳ್ತಿಲ , ಮಾಣಿ, ಕಡೇಶ್ವಾಲ್ಯ ,ಕೆದಿಲ ವಲಯಗಳ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಕುದ್ರೆಬೆಟ್ಟು ಶಾಲೆಯ ಮುಖ್ಯ ಶಿಕ್ಷಕಿ ದೇವಿಕಾ ಸ್ವಾಗತಿಸಿ, ಮಮತಾ ಶೆಟ್ಟಿ ವಂದಿಸಿದರು. ಅಮಿತ ಕುದ್ರೆಬೆಟ್ಟು ಕಾರ್ಯಕ್ರಮ ನಿರೂಪಿಸಿದರು.