ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಹೆಚ್ಚಾಗುತ್ತಿರುವ ಉದ್ವಿಗ್ನತೆ ನಡುವೆ ಇದೀಗ ಕೇಂದ್ರ ಗೃಹ ಸಚಿವಾಲಯದ ಸೂಚನೆ ಅನ್ವಯ ದೇಶದ 244 ಸಿವಿಲ್ ಡಿಫೆನ್ಸ್ ಜಿಲ್ಲೆಗಳಲ್ಲಿ ನಾಳೆ (ಮೆ 07) ಮಾಕ್ ಡ್ರಿಲ್ ನಡೆಯಲಿದೆ.
ಮಾಕ್ ಡ್ರಿಲ್ (Mock Drill) ಮೂಲಕ ನಾಗರಿಕರಿಗೆ ತುರ್ತು ಪರಿಸ್ಥಿತಿಯ ಕಾಲ್ಪನಿಕತೆಯನ್ನು ಕಟ್ಟಿಕೊಡಲಾಗುತ್ತದೆ. ಈ ವೇಳೆ ರಕ್ಷಣಾ ಕ್ರಮದ ತರಬೇತಿ, ವಾಯುದಾಳಿಯ ಸೈರನ್‌ಗಳಿಗೆ ಹೇಗೆ ಪ್ರತಿಕ್ರಿಯಿಸುವುದು, ವಿದ್ಯುತ್ ಕಡಿತ ಹಾಗೂ ಇನ್ನಿತರ ಮೂಲಭೂತ ವಸ್ತುಗಳ ನಿಯಂತ್ರಣಗಳ ಕುರಿತು ತಿಳುವಳಿಕೆ ನೀಡಲಾಗುತ್ತದೆ.
ಏ.22ರಂದು ಮಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಹಿಂದೂಗಳ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯಲ್ಲಿ ಉದ್ವಿಗ್ನತೆ ಉಂಟಾಗಿದ್ದು, ವಿವಿಧ ತುರ್ತು ಪರಿಸ್ಥಿತಿಯಲ್ಲಿ ದೇಶವನ್ನು ಸಿದ್ಧಗೊಳಿಸುವ ಉದ್ದೇಶದಿಂದಾಗಿ ನಾಳೆ ಅಣಕು ಭದ್ರತಾ ಕವಾಯತು ನಡೆಸುವಂತೆ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ .
ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, ನಾಗರಿಕರಿಗೆ ತರಬೇತಿ ನೀಡುವುದು ಈ ಕವಾಯತುಗಳ ಪ್ರಮುಖ ಅಂಶವಾಗಿರುತ್ತದೆ. ವಾಯುದಾಳಿ ಸೈರನ್ ಮತ್ತು ವಿದ್ಯುತ್ ಕಡಿತದ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂಬುವುದರ ಮೇಲೆ ಈ ಕವಾಯತುಗಳು ಗಮನಹರಿಸಲಿವೆ. ಈ ವೇಳೆ ನಾಗರಿಕರು ಅವಶ್ಯ ಸಾಮಗ್ರಿಗಳನ್ನು ಹೆಚ್ಚು ಇರಿಸಿಕೊಳ್ಳುವುದು, ಟಾರ್ಚ್, ಕ್ಯಾಂಡಲ್ ಮತ್ತು ವೈದ್ಯಕೀಯ ಸಲಕರಣೆಗಳನ್ನು ಇರಿಸಿಕೊಳ್ಳುವಂತೆ ಸೂಚನೆ ನೀಡಲಾಗುವುದು. ಜೊತೆಗೆ ಮೊಬೈಲ್ ಮತ್ತು ಡಿಜಿಟಲ್ ವಹಿವಾಟುಗಳ ವಿಫಲಗೊಳ್ಳುವ ಸಂದರ್ಭ ಉಂಟಾದರೆ ನಗದು ಹಣವನ್ನು ಕೈಯಲ್ಲಿ ಇರಿಸಿಕೊಳ್ಳುವಂತೆ ತಿಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇನ್ನೂ ಮಾಕ್ ಡ್ರಿಲ್ ನಡೆಸಲಾಗುವ 244 ಜಿಲ್ಲೆಗಳ ಪೈಕಿ 100ಕ್ಕೂ ಹೆಚ್ಚು ಜಿಲ್ಲೆಗಳನ್ನು ಅತ್ಯಂತ ಸೂಕ್ಷ್ಮ ಸ್ಥಳಗಳೆಂದು ಗುರುತಿಸಲಾಗಿದೆ. ಹೀಗಾಗಿ ಈ ಅಣಕು ಕವಾಯತು ಕೆಲವು ನಿರ್ಣಾಯಕ ಕ್ರಮಗಳನ್ನು ಒಳಗೊಂಡಿರಲಿದೆ.