ರಾಜ್ಯೋತ್ಸವ ಪ್ರಶಸ್ತಿ – 2024ರ ಪ್ರದಾನ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ-50ರ ಸಮಾರೋಪ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಸಿ.ಎಂ.ಸಿದ್ಧರಾಮಯ್ಯ ಪಾಲ್ಗೊಂಡರು.
ಬಳಿಕ ಮಾತನಾಡಿ ಕರ್ನಾಟಕ ಸುವರ್ಣ ಸಂಭ್ರಮ-50 ಸಮಾರೋಪವನ್ನು ಕನ್ನಡ ಜನೋತ್ಸವವಾಗಿ ಆಚರಣೆ ಮಾಡಬೇಕು. ನ್ನಡ ಜನ ಚಳವಳಿ, ಕನ್ನಡತನದ ವಿಸ್ತಾರ, ಕನ್ನಡದ ಅರಿವು ವಿಸ್ತರಿಸಿದ ಮಾದರಿಗಳು, ಹೋರಾಟದ ಹಾದಿಯಲ್ಲಿ ರೂಪುಗೊಂಡ ಕನ್ನಡ ಚರಿತ್ರೆಯನ್ನು ಇವತ್ತಿನ ಕನ್ನಡ ಯುವಜನ ಸಮೂಹಕ್ಕೆ ತಲುಪಿಸಲು ಕ್ರಮ ವಹಿಸಬೇಕು. ಕನ್ನಡ ಭಾಷೆ – ಸಂಸ್ಕೃತಿ – ಸಂಗೀತ – ಸಾಹಿತ್ಯ – ಜನಪದ -ಚರಿತ್ರೆ ಎಲ್ಲದರ ಮಹತ್ವ ಸಾರುವಂತೆ ಕಾರ್ಯಕ್ರಮದ ಆಯೋಜನೆಯಾಗಲಿ.
ರಾಜ್ಯೋತ್ಸವ ಪ್ರಶಸ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಸೆಪ್ಟಂಬರ್ 30ರ ವರೆಗೆ ಅರ್ಜಿ ಸಲ್ಲಿಸಬಹುದು. 69 ಮಂದಿಗೆ ಈ ಬಾರಿ ಪ್ರಶಸ್ತಿ ನೀಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಆಯ್ಕೆಗೆ ಸಮಿತಿ ರಚಿಸಲಾಗಿದೆ. ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ನಡೆಯುತ್ತಿದ್ದು, ಹಂಪಿಯಿಂದ ಆರಂಭವಾದ ಕನ್ನಡ ರಥ ಯಾತ್ರೆ ಈಗಾಗಲೇ 28 ಜಿಲ್ಲೆಗಳಲ್ಲಿ ಸಾಗಿದ್ದು, ರಥಯಾತ್ರೆಯ ಸಮಾರೋಪ ಸಮಾರಂಭ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆಯಲಿದೆ.
ಕರ್ನಾಟಕ ಸುವರ್ಣ ಸoಭ್ರಮ -50 ಸಮಾರೋಪ ಸಮಾರಂಭ ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿದೆ. ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಹ ಇದೇ ಸಂದರ್ಭದಲ್ಲಿ ಮಾಡಲಾಗುವುದು ಎಂದರು. ಮೈಸೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಪ್ರತಿಮೆ ಸ್ಥಾಪನೆ ಕಾಮಗಾರಿ ಪ್ರಗತಿಯಲ್ಲಿದೆ. ಬಳ್ಳಾರಿಯಲ್ಲಿ ರಂಜಾನ್ ಸಾಬ್ ಸ್ಮಾರಕ ನಿರ್ಮಾಣ ಕಾರ್ಯ ನಡೆಯುತ್ತಿದೆ. ಧಾರವಾಡದಲ್ಲಿ ಅದರಗುಂಚಿ ಶಂಕರಗೌಡ ಸ್ಮಾರಕ ನಿರ್ಮಿಸಲು ಅಂದಾಜು ವೆಚ್ಚ ಸಲ್ಲಿಸಲಾಗಿದೆ. ಗದಗದಲ್ಲಿ ಅಂದಾನಪ್ಪ ದೊಡ್ಡ ಮೇಟಿ ಸ್ಮಾರಕ ನಿರ್ಮಿಸಲಾಗುತ್ತಿದೆ.
50 ಸಾಧಕ ಮಹಿಳೆಯರ ಕುರಿತು 100 ಪುಟಗಳ 50 ಕೃತಿಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಮೂಲಕ ಮುದ್ರಿಸಲಾಗುವುದು. ವಿಧಾನಸೌಧ ಆವರಣದಲ್ಲಿ 25ಅಡಿ ಎತ್ತರದ ಭುವನೇಶ್ವರಿದೇವಿ ಕಂಚಿನ ಪ್ರತಿಮೆ ಕಾಮಗಾರಿ ಪ್ರಗತಿಯಲ್ಲಿದ್ದು, ನವೆಂಬರ್ 1ರಂದು ಅನಾವರಣಗೊಳ್ಳಲಿದೆ. ರಾಜ್ಯದ ನಾಲ್ಕು ವಲಯಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಮೈಸೂರಿನಲ್ಲಿ ಚಿಂತನಾ ಸಮಾವೇಶ, ರಾಯಚೂರಿಗೆ ಗೋಕಾಕ್ ಚಳವಳಿ ಸಂಸ್ಮರಣೆ, ಮಹಾರಾಷ್ಟ್ರದ ಜತ್ ತಾಲೂಕಿನಲ್ಲಿ ಗಡಿನಾಡು ಸಾಂಸ್ಕೃತಿಕ ಉತ್ಸವ ಮತ್ತು ಮಂಗಳೂರಿನಲ್ಲಿ ವಿವಿಧ ಅಕಾಡೆಮಿ ಸಹಯೋಗದಲ್ಲಿ ಬಹುಸಂಸ್ಕೃತಿ ಉತ್ಸವ ಆಯೋಜನೆ ಮಾಡಲಾಗುವುದು ಎಂದರು.