ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ‘ ಮನದ ಮಾತಿಗೆ’ ಎಲ್ಲರಿಗೂ ಸ್ವಾಗತ. ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳು ಯಾವುವು ಎಂದು ನನ್ನನ್ನು ನೀವು ಕೇಳಿದರೆ, ಬಹಳಷ್ಟು ಘಟನೆಗಳು ನೆನಪಿಗೆ ಬರುತ್ತವೆ, ಅದರಲ್ಲೂ ಒಂದು ವಿಶೇಷವಾದ ಕ್ಷಣವಿದೆ, ಅದೇ ಕಳೆದ ವರ್ಷ ನವೆಂಬರ್ 15 ರಂದು ನಾನು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಂದು ಜಾರ್ಖಂಡ್‌ನ ಅವರ ಜನ್ಮಸ್ಥಳ ಉಲಿಹಾತು ಗ್ರಾಮಕ್ಕೆ ಹೋಗಿದ್ದು. ನನ್ನ ಮೇಲೆ ಈ ಪ್ರವಾಸದ ಪ್ರಭಾವ ಆಗಾಧವಾಗಿತ್ತು. ಈ ಪುಣ್ಯಭೂಮಿಯ ಮಣ್ಣಿನ ಆಶೀರ್ವಾದ ಪಡೆಯುವ ಭಾಗ್ಯವನ್ನು ಪಡೆದ ದೇಶದ ಮೊದಲ ಪ್ರಧಾನಿ ನಾನಾಗಿದ್ದೇನೆ. ಆ ಕ್ಷಣದಲ್ಲಿ ನನಗೆ ಸ್ವಾತಂತ್ರ್ಯ ಹೋರಾಟದ ಶಕ್ತಿಯ ಅನುಭವವಾದುದಲ್ಲದೆ, ಈ ಭೂಮಿಯ ಶಕ್ತಿಯೊಂದಿಗೆ ಬೆರೆಯುವ ಅವಕಾಶವೂ ಲಭಿಸಿತು. ಒಂದು ನಿರ್ಧಾರವನ್ನು ಪೂರೈಸುವ ಧೈರ್ಯ ಹೇಗೆ ದೇಶದ ಕೋಟ್ಯಾಂತರ ಜನರ ಭವಿಷ್ಯವನ್ನು ಬದಲಾಯಿಸುತ್ತದೆ ಎಂಬುದರ ಅನುಭವವೂ ನನಗಾಯಿತು.

ಸ್ನೇಹಿತರೇ, ಭಾರತದಲ್ಲಿ ಯುಗ ಯುಗದಲ್ಲೂ ಕೆಲವು ಸವಾಲುಗಳು ಎದುರಾಗಿವೆ ಮತ್ತು ಪ್ರತಿ ಯುಗದಲ್ಲೂ ಈ ಸವಾಲುಗಳನ್ನು ಎದುರಿಸಿದಂತಹ ಇಂತಹ ಅಸಾಮಾನ್ಯ ಭಾರತೀಯರು ಜನಿಸಿದ್ದಾರೆ. ಇಂದಿನ ‘ಮನದ ಮಾತು’ ನಲ್ಲಿ ಧೈರ್ಯ ಮತ್ತು ದೂರದೃಷ್ಟಿ ಹೊಂದಿರುವ ಇಬ್ಬರು ಮಹಾನ್ ವೀರರ ಬಗ್ಗೆ ಚರ್ಚಿಸುತ್ತೇನೆ. ಅವರ 150ನೇ ಜನ್ಮ ಜಯಂತಿಯನ್ನು ಆಚರಿಸಲು ದೇಶ ನಿರ್ಧರಿಸಿದೆ. ಅಕ್ಟೋಬರ್ 31 ರಿಂದ ಸರ್ದಾರ್ ಪಟೇಲ್ ಅವರ 150 ನೇ ಜನ್ಮ ಜಯಂತಿಯ ವರ್ಷ ಪ್ರಾರಂಭವಾಗಲಿದೆ. ಇದರ ನಂತರ, ನವೆಂಬರ್ 15 ರಿಂದ ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜನ್ಮ ಜಯಂತಿಯ ವರ್ಷ ಪ್ರಾರಂಭವಾಗಲಿದೆ. ಈ ಇಬ್ಬರೂ ಮಹಾನ್ ವ್ಯಕ್ತಿಗಳು ವಿಭಿನ್ನ ಸವಾಲುಗಳನ್ನು ಎದುರಿಸಿದ್ದಾರೆ, ಆದರೆ ಇಬ್ಬರೂ ‘ದೇಶದ ಏಕತೆ’ಯ ಒಂದೇ ದೃಷ್ಟಿಕೋನವನ್ನು ಹೊಂದಿದ್ದರು.

ಸ್ನೇಹಿತರೇ, ಕಳೆದ ವರ್ಷಗಳಲ್ಲಿ, ದೇಶವು ಹೊಸ ಶಕ್ತಿಯೊಂದಿಗೆ ಇಂತಹ ಮಹಾನ್ ವೀರರ ಮತ್ತು ನಾಯಕಿಯರ ಜಯಂತಿಯನ್ನು ಆಚರಿಸುವ ಮೂಲಕ ಹೊಸ ಪೀಳಿಗೆಗೆ ಹೊಸ ಸ್ಫೂರ್ತಿಯನ್ನು ನೀಡಿದೆ. ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಜಯಂತಿಯನ್ನು ಆಚರಿಸಿದಾಗ ಎಷ್ಟು ವಿಶೇಷವಾದ ಘಟನೆ ನಡೆದಿದ್ದವು ಎಂಬುದು ನಿಮಗೆ ನೆನಪಿರಬಹುದು. ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಿಂದ ಆಫ್ರಿಕಾದ ಸಣ್ಣ ಪುಟ್ಟ ಗ್ರಾಮಗಳವರೆಗೆ, ಪ್ರಪಂಚದಾದ್ಯಂತದ ಜನರು ಭಾರತದ ಸತ್ಯ ಮತ್ತು ಅಹಿಂಸೆಯ ಸಂದೇಶದ ಸಾರವನ್ನು ಅರಿತರು, ಅದನ್ನು ಮತ್ತೊಮ್ಮೆ ತಿಳಿದುಕೊಂಡರು ಮತ್ತು ಅವನ್ನು ಬದುಕಿನಲ್ಲಿ ಅಳವಡಿಸಿಕೊಂಡರು. ಕಿರಿಯರಿಂದ ಹಿರಿಯರವರೆಗೆ, ಭಾರತೀಯರಿಂದ ಹಿಡಿದು ವಿದೇಶಿಯರವರೆಗೆ ಎಲ್ಲರೂ ಗಾಂಧೀಜಿಯವರ ಬೋಧನೆಗಳನ್ನು ಈ ಹೊಸ ಸಂದರ್ಭದಲ್ಲಿ ಅರ್ಥಮಾಡಿಕೊಂಡರು, ಹೊಸ ಜಾಗತಿಕ ಪರಿಸ್ಥಿತಿಗಳಲ್ಲಿ ಅವುಗಳನ್ನು ತಿಳಿದುಕೊಂಡರು. ನಾವು ಸ್ವಾಮಿ ವಿವೇಕಾನಂದರ 150ನೇ ಜನ್ಮ ಜಯಂತಿಯನ್ನು ಆಚರಿಸಿದಾಗ, ದೇಶದ ಯುವಕರು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಹೊಸ ವ್ಯಾಖ್ಯಾನದ ರೂಪದಲ್ಲಿ ಅರ್ಥಮಾಡಿಕೊಂಡರು. ನಮ್ಮ ಮಹಾನ್ ಪುರುಷರು ಭೂತಕಾಲದಲ್ಲಿ ಕಳೆದುಹೋಗಿಲ್ಲ, ಬದಲಿಗೆ ಅವರ ಜೀವನವು ನಮ್ಮ ವರ್ತಮಾನವನ್ನು ಮುನ್ನಡೆಸುವ ಭವಿಷ್ಯದ ದಾರಿಯನ್ನು ತೋರಿಸುತ್ತದೆ ಎಂದು ಈ ಯೋಜನೆಗಳು ನಮಗೆ ಅರಿವು ಮೂಡಿಸಿದವು.

ಸ್ನೇಹಿತರೇ, ಈ ಮಹಾನ್ ವ್ಯಕ್ತಿತ್ವಗಳ 150 ನೇ ಜನ್ಮ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಲು ಸರ್ಕಾರ ನಿರ್ಧರಿಸಿದ್ದರೂ, ನಿಮ್ಮ ಪಾಲ್ಗೊಳ್ಳುವಿಕೆ ಮಾತ್ರ ಈ ಅಭಿಯಾನಕ್ಕೆ ಜೀವ ತುಂಬುತ್ತದೆ ಮತ್ತು ಅದನ್ನು ಯಶಸ್ವಿಗೊಳಿಸುತ್ತದೆ. ಈ ಅಭಿಯಾನದಲ್ಲಿ ಭಾಗವಹಿಸುವಂತೆ ನಾನು ನಿಮ್ಮೆಲ್ಲರನ್ನು ಕೋರುತ್ತೇನೆ. ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರಿಗೆ ಸಂಬಂಧಿಸಿದ ನಿಮ್ಮ ವಿಚಾರಗಳು ಮತ್ತು ಕಾರ್ಯಗಳನ್ನು #Sardar150 ಯೊಂದಿಗೆ ಹಂಚಿಕೊಳ್ಳಿ ಮತ್ತು ಧರ್ತಿ-ಆಬಾ ಬಿರ್ಸಾ ಮುಂಡಾ ಅವರ ಪ್ರೇರಣಾದಾಯಕ ವಿಚಾರಗಳನ್ನು #BirsaMunda150 ರೊಂದಿಗೆ ಜಗತ್ತಿಗೆ ಪರಿಚಾಯಿಸಿ. ಬನ್ನಿ ನಾವೆಲ್ಲರೂ ಒಗ್ಗೂಡಿ ಈ ಹಬ್ಬವನ್ನು ಭಾರತದ ವಿವಿಧತೆಯಲ್ಲಿ ಏಕತೆಯ ಆಚರಣೆಯಾಗಿಸೋಣ, ಇದನ್ನು ಪರಂಪರೆಯಿಂದ ಅಭಿವೃದ್ಧಿಯ ಆಚರಣೆಯಾಗಿ ಬದಲಾಯಿಸೋಣ.

ನನ್ನ ಪ್ರಿಯ ದೇಶವಾಸಿಗಳೇ, “ಛೋಟಾ ಭೀಮ್” ಟಿವಿಯಲ್ಲಿ ಪ್ರಸಾರವಾಗಲು ಆರಂಭವಾದ ಆ ದಿನಗಳನ್ನು ನೀವು ನೆನಪಿಸಿಕೊಳ್ಳಬೇಕು. ‘ಛೋಟಾ ಭೀಮ್’ ಬಗ್ಗೆ ಮಕ್ಕಳಲ್ಲಿ ಅದೆಷ್ಟು ಉತ್ಸುಕತೆಯಿತ್ತು ಎಂಬುದನ್ನು ಮರೆಯಲು ಸಾಧ್ಯವೇ ಇಲ್ಲ. ಇಂದು ‘ಢೋಲಕ್‌ಪುರ್ ಕಾ ಢೋಲ್’ ಭಾರತದಲ್ಲಿ ಮಾತ್ರವಲ್ಲದೆ ಇತರ ದೇಶಗಳ ಮಕ್ಕಳನ್ನು ಕೂಡ ಬಹಳ ಆಕರ್ಷಿಸುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇದೇ ರೀತಿ ನಮ್ಮ ಇತರ ಅನಿಮೇಟೆಡ್ ಧಾರಾವಾಹಿಗಳಾದ ‘ಕೃಷ್ಣ’, ‘ಹನುಮಾನ್’, ‘ಮೋಟು-ಪತಲೂ’ ಗಳನ್ನೂ ಇಷ್ಟಪಡುವ ಅಭಿಮಾನಿಗಳು ಜಗತ್ತಿನಾದ್ಯಂತ ಇದ್ದಾರೆ. ಭಾರತೀಯ ಅನಿಮೇಷನ್ ಪಾತ್ರಗಳು: ಇಲ್ಲಿನ ಅನಿಮೇಷನ್ ಚಲನಚಿತ್ರಗಳು ಅವುಗಳ ವಿಷಯ ಮತ್ತು ಸೃಜನಶೀಲತೆಯಿಂದಾಗಿ ಪ್ರಪಂಚದಾದ್ಯಂತ ಮೆಚ್ಚುಗೆ ಪಡೆಯುತ್ತಿವೆ. ಸ್ಮಾರ್ಟ್‌ಫೋನ್‌ನಿಂದ ಸಿನಿಮಾ ಪರದೆಯವರೆಗೆ, ಗೇಮಿಂಗ್ ಕನ್ಸೋಲ್‌ನಿಂದ ವರ್ಚುವಲ್ ರಿಯಾಲಿಟಿವರೆಗೆ, ಅನಿಮೇಷನ್ ಎಲ್ಲೆಡೆ ಇರುವುದನ್ನು ನೀವು ನೋಡಿರಬಹುದು. ಅನಿಮೇಷನ್ ಜಗತ್ತಿನಲ್ಲಿ ಭಾರತ ಹೊಸ ಕ್ರಾಂತಿಯನ್ನು ನಿರ್ಮಿಸುವತ್ತ ದಾಪುಗಾಲಿಟ್ಟಿದೆ. ಭಾರತದ ಗೇಮಿಂಗ್ ಸ್ಪೇಸ್ ಕೂಡ ವೇಗವಾಗಿ ವಿಸ್ತರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಆಟಗಳು ಪ್ರಪಂಚದಾದ್ಯಂತ ಜನಪ್ರಿಯಗೊಳ್ಳುತ್ತಿವೆ. ಕೆಲವು ತಿಂಗಳುಗಳ ಹಿಂದೆ, ನಾನು ಭಾರತದ ಪ್ರಮುಖ ಗೇಮರ್ ಗಳನ್ನು ಭೇಟಿಯಾಗಿದ್ದೆ. ಆಗ ನನಗೆ ಭಾರತೀಯ ಗೇಮ್ ಗಳ ಅದ್ಭುತ ಸೃಜನಶೀಲತೆ ಮತ್ತು ಗುಣಮಟ್ಟದ ಬಗ್ಗೆ ತಿಳಿಯಲು ಮತ್ತು ಅರ್ಥಮಾಡಿಕೊಳ್ಳಲು ಅವಕಾಶ ಲಭಿಸಿತು. ವಾಸ್ತವದಲ್ಲಿ, ದೇಶದಲ್ಲಿ ಸೃಜನಶೀಲ ಶಕ್ತಿಯ ಅಲೆ ಎದ್ದಿದೆ. ಅನಿಮೇಷನ್ ಜಗತ್ತಿನಲ್ಲಿ, ‘ಮೇಡ್ ಇನ್ ಇಂಡಿಯಾ’ ಮತ್ತು ‘ಮೇಡ್ ಬೈ ಇಂಡಿಯನ್ಸ್’ ಪ್ರಚಲಿತದಲ್ಲಿವೆ. ಇಂದು ಭಾರತೀಯ ಪ್ರತಿಭೆಗಳು ವಿದೇಶಿ ನಿರ್ಮಾಣಗಳ ಪ್ರಮುಖ ಭಾಗವಾಗುತ್ತಿವೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಈಗಿನ ಸ್ಪೈಡರ್ ಮ್ಯಾನ್ ಆಗಿರಲಿ ಅಥವಾ ಟ್ರಾನ್ಸ್‌ಫಾರ್ಮರ್ಸ್ ಆಗಿರಲಿ, ಈ ಎರಡೂ ಸಿನಿಮಾಗಳಲ್ಲಿ ಹರಿನಾರಾಯಣ ರಾಜೀವ್ ಅವರ ಕೊಡುಗೆಯನ್ನು ಜನರು ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಭಾರತದ ಅನಿಮೇಷನ್ ಸ್ಟುಡಿಯೋಗಳು ಪ್ರಪಂಚದ ಪ್ರಸಿದ್ಧ ನಿರ್ಮಾಣ ಕಂಪನಿಗಳಾದ ಡಿಸ್ನಿ ಮತ್ತು ವಾರ್ನರ್ ಬ್ರದರ್ಸ್‌ನೊಂದಿಗೆ ಕೆಲಸ ಮಾಡುತ್ತಿವೆ.

ಸ್ನೇಹಿತರೇ, ಇಂದು ನಮ್ಮ ಯುವಜನತೆ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬೀಸುವ ಶುದ್ಧ ಭಾರತೀಯ ಮೂಲದ ವಿಷಯವಸ್ತುಗಳ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರಗಳನ್ನು ಪ್ರಪಂಚದಾದ್ಯಂತ ವೀಕ್ಷಿಸಲಾಗುತ್ತಿದೆ. ಅನಿಮೇಷನ್ ಕ್ಷೇತ್ರವು ಇಂದು ಉದ್ಯಮದ ರೂಪವನ್ನು ಪಡೆದುಕೊಂಡಿದ್ದು, ಇತರ ಉದ್ಯಮಗಳಿಗೂ ಪುಷ್ಟಿ ನೀಡುತ್ತಿದೆ. ವಿ ಆರ್ (ವರ್ಚುವಲ್) ಪ್ರವಾಸೋದ್ಯಮವು ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗುತ್ತಿದೆ. ನೀವು ವರ್ಚುವಲ್ ಪ್ರವಾಸದ ಮೂಲಕ ಅಜಂತಾ ಗುಹೆಗಳನ್ನು ನೋಡಬಹುದು, ಕೋನಾರ್ಕ್ ದೇವಾಲಯದ ಕಾರಿಡಾರ್‌ಗಳ ಮೂಲಕ ಅಡ್ಡಾಡಬಹುದು ಅಥವಾ ವಾರಣಾಸಿಯ ಘಾಟ್‌ಗಳ ಆನಂದವನ್ನು ಅನುಭವಿಸಬಹುದು. ಈ ಎಲ್ಲಾ ವಿ ಆರ್ ಅನಿಮೇಷನ್‌ಗಳನ್ನು ಭಾರತದ ಅನಿಮೇಟರ್ ಗಳು ಸಿದ್ಧಪಡಿಸಿದ್ದಾರೆ. ವಿ ಆರ್ ಮೂಲಕ ಈ ಸ್ಥಳಗಳನ್ನು ನೋಡಿದ ನಂತರ, ಅನೇಕ ಜನರು ಈ ಪ್ರವಾಸಿ ಸ್ಥಳಗಳಿಗೆ ವಾಸ್ತವ ಭೇಟಿ ನೀಡಲು ಬಯಸುತ್ತಾರೆ, ಅಂದರೆ ಪ್ರವಾಸಿ ತಾಣದ ವರ್ಚುವಲ್ ಪ್ರವಾಸವು ಜನರ ಮನಸ್ಸಿನಲ್ಲಿ ಕುತೂಹಲವನ್ನು ಮೂಡಿಸುವ ಮಾಧ್ಯಮವಾಗಿದೆ. ಇಂದು, ಈ ವಲಯದಲ್ಲಿ, ಆನಿಮೇಟರ್‌ಗಳ ಜೊತೆಗೆ ಕಥೆ ಹೇಳುವವರು, ಬರಹಗಾರರು, ಹಿನ್ನೆಲೆ ಧ್ವನಿ ತಜ್ಞರು, ಸಂಗೀತಗಾರರು, ಗೇಮ್ ಡೆವಲಪರ್‌ಗಳು, ವಿ ಆರ್ ಮತ್ತು ಎ ಆರ್ ತಜ್ಞರ ಬೇಡಿಕೆಯೂ ನಿರಂತರವಾಗಿ ಹೆಚ್ಚುತ್ತಿದೆ. ಆದ್ದರಿಂದ, ನಾನು ಭಾರತದ ಯುವಕರಿಗೆ ಹೇಳುವುದೇನೆಂದರೆ – ನಿಮ್ಮ ಸೃಜನಶೀಲತೆಯನ್ನು ವೃದ್ಧಿಸಿಕೊಳ್ಳಿ. ಯಾರಿಗೆ ಗೊತ್ತು, ವಿಶ್ವದ ಮುಂದಿನ ಸೂಪರ್ ಹಿಟ್ ಅನಿಮೇಷನ್ ನಿಮ್ಮ ಕಂಪ್ಯೂಟರ್‌ನಿಂದ ಹೊರಬರಬಹುದು! ಮುಂದಿನ ವೈರಲ್ ಗೇಮ್ ನಿಮ್ಮದೇ ಸೃಷ್ಟಿಯಾಗಿರಬಹುದು! ಶೈಕ್ಷಣಿಕ ಅನಿಮೇಷನ್‌ಗಳಲ್ಲಿ ನಿಮ್ಮ ನಾವೀನ್ಯತೆ ಉತ್ತಮ ಯಶಸ್ಸನ್ನು ಸಾಧಿಸಬಹುದು. ಇದೇ ಅಕ್ಟೋಬರ್ 28 ರಂದು ಅಂದರೆ ನಾಳೆ ‘ವಿಶ್ವ ಅನಿಮೇಷನ್ ದಿನ’ವನ್ನು ಸಹ ಆಚರಿಸಲಾಗುತ್ತದೆ. ಬನ್ನಿ, ಭಾರತವನ್ನು ಜಾಗತಿಕ ಅನಿಮೇಷನ್ ಪವರ್ ಹೌಸ್ ಮಾಡಲು ಸಂಕಲ್ಪಗೈಯೋಣ .

ನನ್ನ ಪ್ರಿಯ ದೇಶವಾಸಿಗಳೇ, ಸ್ವಾಮಿ ವಿವೇಕಾನಂದರು ಒಂದೊಮ್ಮೆ ಯಶಸ್ಸಿನ ಮಂತ್ರವನ್ನು ನೀಡಿದ್ದರು, ಅವರ ಮಂತ್ರ ಹೀಗಿತ್ತು – ‘ಒಂದು ವಿಚಾರವನ್ನು ಕೈಗೆತ್ತಿಕೊಳ್ಳಿ, ಅದನ್ನೇ ಜೀವನವನ್ನಾಗಿಸಿಕೊಳ್ಳಿ, ಅದರ ಬಗ್ಗೆ ಯೋಚಿಸಿ, ಅದರ ಬಗ್ಗೆ ಕನಸು ಕಾಣಿರಿ. ಅದನ್ನೇ ಜೀವಿಸಲಾರಂಭಿಸಿ.” ಇಂದು, ಸ್ವಾವಲಂಬಿ ಭಾರತ ಅದೇ ಯಶಸ್ಸಿನ ಮಂತ್ರದ ಮೇಲೆಯೇ ಮುಂದೆ ಸಾಗಿದೆ. ಈ ಅಭಿಯಾನವು ನಮ್ಮ ಸಾಮೂಹಿಕ ಪ್ರಜ್ಞೆಯ ಭಾಗವಾಗಿದೆ. ಪ್ರತಿ ಹಂತದಲ್ಲೂ ನಿರಂತರವಾಗಿ ಸ್ಫೂರ್ತಿಯ ಸೆಲೆಯಾಗಿದೆ. ಸ್ವಾವಲಂಬನೆ ನಮ್ಮ policy ಮಾತ್ರವಲ್ಲ, ನಮ್ಮ passion ಕೂಡಾ ಆಗಿದೆ. ಬಹಳ ವರ್ಷಗಳೇನು ಆಗಿಲ್ಲ, ಕೇವಲ 10 ವರ್ಷಗಳ ಹಿಂದಿನ ಮಾತು. ಭಾರತದಲ್ಲಿ ಯಾವುದೋ ಸಂಕೀರ್ಣ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು ಎಂದು ಯಾರಾದರೂ ಹೇಳಿದರೆ, ಅನೇಕರು ಅದನ್ನು ನಂಬುತ್ತಿರಲಿಲ್ಲ, ಅನೇಕರು ಅಪಹಾಸ್ಯ ಮಾಡುತ್ತಿದ್ದರು – ಆದರೆ ಇಂದು ಅದೇ ಜನರು ದೇಶದ ಯಶಸ್ಸನ್ನು ನೋಡಿದ ನಂತರ ದಿಗ್ಭ್ರಮೆಗೊಂಡಿದ್ದಾರೆ. ಭಾರತ ಸ್ವಾವಲಂಬಿಯಾಗುತ್ತಿದೆ, ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತ ಸಾಧನೆ ಮಾಡುತ್ತಿದೆ. ಒಂದು ಕಾಲದಲ್ಲಿ ಮೊಬೈಲ್ ಫೋನ್‌ಗಳ ಆಮದುದಾರರಾಗಿದ್ದ ಭಾರತ ಇಂದು ವಿಶ್ವದ ಎರಡನೇ ಅತಿ ದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಒಂದು ಕಾಲದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ರಕ್ಷಣಾ ಸಾಧನಗಳನ್ನು ಖರೀದಿಸುವ ದೇಶವಾಗಿದ್ದ ಭಾರತ ಇಂದು 85 ದೇಶಗಳಿಗೆ ರಫ್ತು ಮಾಡುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ, ಇಂದು ಭಾರತವು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ರಾಷ್ಟ್ರವಾಗಿದೆ. ನಾನು ಅತ್ಯಂತ ಇಷ್ಟಪಡುವ ಒಂದು ವಿಷಯವೆಂದರೆ ಈ ಸ್ವಾವಲಂಬನೆಯ ಅಭಿಯಾನವು ಕೇವಲ ಸರ್ಕಾರಿ ಅಭಿಯಾನವಾಗಿ ಉಳಿದಿಲ್ಲ, ಈಗ ಸ್ವಾವಲಂಬಿ ಭಾರತ ಅಭಿಯಾನವು ಸಾಮೂಹಿಕ ಅಭಿಯಾನವಾಗುತ್ತಿದೆ – ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆಗೈಯುತ್ತಿದೆ. ಉದಾಹರಣೆಗೆ, ಈ ತಿಂಗಳು ನಾವು ಲಡಾಖ್‌ನ ಹಾನ್ಲೆಯಲ್ಲಿ ಏಷ್ಯಾದ ಅತಿದೊಡ್ಡ ‘ಇಮೇಜಿಂಗ್ ಟೆಲಿಸ್ಕೋಪ್ MACE’ ಅನ್ನು ಸಹ ಉದ್ಘಾಟಿಸಿದ್ದೇವೆ. ಇದು 4300 ಮೀಟರ್ ಎತ್ತರದಲ್ಲಿದೆ. ಇದರ ವಿಶೇಷತೆ ಏನೆಂದು ತಿಳಿಯೋಣ! ಇದು ‘ಮೇಡ್ ಇನ್ ಇಂಡಿಯಾ’ ಆಗಿದೆ. ಮೈನಸ್ 30 ಡಿಗ್ರಿಯಷ್ಟು ಚಳಿಯಿರುವ ಸ್ಥಳದಲ್ಲಿ, ಆಮ್ಲಜನಕದ ಕೊರತೆಯಿರುವ ಸ್ಥಳದಲ್ಲಿ, ನಮ್ಮ ವಿಜ್ಞಾನಿಗಳು ಮತ್ತು ಸ್ಥಳೀಯ ಉದ್ಯಮಗಳು ಏಷ್ಯಾದ ಯಾವುದೇ ದೇಶ ಮಾಡದ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಹ್ಯಾನ್ಲಿಯ ದೂರದರ್ಶಕವು ದೂರದ ಜಗತ್ತನ್ನು ನೋಡುತ್ತಿರಬಹುದು, ಆದರೆ ಅದು ನಮಗೆ ಇನ್ನೂ ಒಂದು ವಿಷಯ ಅಂದರೆ ‘ಸ್ವಾವಲಂಬಿ ಭಾರತದ ಸಾಮರ್ಥ್ಯವನ್ನು’ ತೋರಿಸುತ್ತಿದೆ,

ಸ್ನೇಹಿತರೇ, ನೀವು ಕೂಡ ಒಂದು ಕೆಲಸ ಮಾಡಬೇಕೆಂದು ನಾನು ಬಯಸುತ್ತೇನೆ. ಸ್ವಾವಲಂಬಿಯಾಗುತ್ತಿರುವ ಭಾರತದ ಅಂತಹ ಪ್ರಯತ್ನಗಳ ಉದಾಹರಣೆಗಳನ್ನು ಸಾಧ್ಯವಾದಷ್ಟು ಹಂಚಿಕೊಳ್ಳಿ. ನಿಮ್ಮ ನೆರೆಹೊರೆಯಲ್ಲಿ ನೀವು ಯಾವ ಹೊಸ ಆವಿಷ್ಕಾರವನ್ನು ನೋಡಿದ್ದೀರಿ, ಯಾವ ಸ್ಥಳೀಯ ಸ್ಟಾರ್ಟ್ ಅಪ್ ನಿಮ್ಮ ಮೇಲೆ ಹೆಚ್ಚು ಪ್ರಭಾವ ಬೀರಿದೆ, ಈ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ #AatmanirbharInnovation ಜೊತೆಗೆ ಬರೆಯಿರಿ ಮತ್ತು ಸ್ವಾವಲಂಬಿ ಭಾರತವನ್ನು ಉತ್ಸವವನ್ನು ಆಚರಿಸಿ. ಈ ಹಬ್ಬದ ಋತುವಿನಲ್ಲಿ, ನಾವೆಲ್ಲರೂ ಸ್ವಾವಲಂಬಿ ಭಾರತದ ಅಭಿಯಾನಕ್ಕೆ ಮತ್ತಷ್ಟು ಪುಷ್ಟಿ ನೀಡೋಣ. ನಾವು vocal for local ಸ್ಥಳೀಯ ವಸ್ತುಗಳಿಗೆ ದನಿಯಾಗುವ ಮಂತ್ರದೊಂದಿಗೆ ನಮ್ಮ ಖರೀದಿಗಳನ್ನು ಮಾಡೋಣ. ಇದು ಹೊಸ ಭಾರತ, ಇಲ್ಲಿ ಅಸಾಧ್ಯ ಎಂಬುದು ಕೇವಲ ಒಂದು ಸವಾಲು ಅಷ್ಟೇ, ಈಗ ಮೇಕ್ ಇನ್ ಇಂಡಿಯಾ ಈಗ ಮೇಕ್ ಫಾರ್ ದಿ ವರ್ಲ್ಡ್ ಆಗಿ ಮಾರ್ಪಟ್ಟಿದೆ, ಇಲ್ಲಿ ಪ್ರತಿಯೊಬ್ಬ ನಾಗರಿಕನು ಇನ್ನೋವೇಟರ್ ಆಗಿದ್ದಾನೆ, ಇಲ್ಲಿ ಪ್ರತಿ ಸವಾಲು ಅವಕಾಶವಾಗಿದೆ. ನಾವು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಮಾತ್ರವಲ್ಲ, ನಮ್ಮ ದೇಶವನ್ನು ನಾವೀನ್ಯತೆಯ ಜಾಗತಿಕ ಶಕ್ತಿಯ ಕೇಂದ್ರವಾಗಿ ಬಲಪಡಿಸಬೇಕಿದೆ.