ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್‌ ಚುನಾವಣೆಯು ನಡೆಯಿತು.

ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕನ ಆಯ್ಕೆ, ಮತದಾನ, ಪ್ರಜಾಪ್ರಭುತ್ವದ ಮಹತ್ವ ಹಾಗೂ ಚುನಾವಣೆ ಪ್ರಕ್ರಿಯೆಯನ್ನು ತಿಳಿಸುವ ನಿಟ್ಟಿನಲ್ಲಿ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಲು ಈ ಮತದಾನವನ್ನು ಹಮ್ಮಿಕೊಳ್ಳಲಾಗಿತ್ತು.

ಚುನಾವಣೆ ಅಧಿಸೂಚನೆಯ ಮೂಲಕ ಆರಂಭಗೊಂಡ ಪ್ರಕ್ರಿಯೆಯು ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆತ ಹಾಗೂ ಚುನಾವಣಾ ಪ್ರಚಾರ ನಡೆದು, ಚುನಾವಣೆಯ ದಿನ ಎಲ್ಲಾ ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿಯೊಂದಿಗೆ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು ಹಾಗೂ ಮತ ಚಲಾಯಿಸಿದ ವಿದ್ಯಾರ್ಥಿಗಳ ಕೈ ಬೆರಳಿಗೆ ಶಾಯಿಯನ್ನು ಹಾಕಲಾಯಿತು. ತಮ್ಮಕೈಯಲ್ಲಿರುವ ಶಾಯಿಯನ್ನುಕಂಡು ವಿದ್ಯಾರ್ಥಿಗಳು ಸಂಭ್ರಮಿಸಿದರು.

ಒಟ್ಟು 10 ಮತಗಟ್ಟೆಗಳನ್ನು ರಚಿಸಿದ್ದು, ಒಂದೊಂದು ಮತ ಕ್ಷೇತ್ರಕ್ಕೆ ಪುಣ್ಯಕ್ಷೇತ್ರಗಳಾದ ಅಯೋಧ್ಯೆ, ಮಥುರಾ, ಕಾಶಿ, ಪ್ರಯಾಗ, ವಿಜಯನಗರ, ಕನ್ಯಾಕುಮಾರಿ, ರಾಮೇಶ್ವರ, ಇಂದ್ರಪ್ರಸ್ಥ, ಕಂಚಿ, ಶೃಂಗೇರಿ ಎಂಬ ಹೆಸರನ್ನು ಸೂಚಿಸಲಾಗಿತ್ತು. ಈ 10 ಕ್ಷೇತ್ರಗಳಲ್ಲಿ ಶಾಲಾ ನಾಯಕ, ಕ್ರೀಡಾ ಮಂತ್ರಿ, ಆರೋಗ್ಯ ಮಂತ್ರಿ, ಸ್ವಚ್ಛತ ಮಂತ್ರಿ ಹೀಗೆ ಹಲವು ಮಂತ್ರಿಗಳ ಸ್ಥಾನಕ್ಕೆ ಅಭ್ಯರ್ಥಿಗಳು ನಿಂತಿದ್ದು, 5, 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಮತದಾನ ಮಾಡುವ ಅವಕಾಶವನ್ನು ನೀಡಲಾಯಿತು.

ಸಹಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ ಎಮ್ ಮೊದಲ ಮತದಾನ ಮಾಡುವ ಮೂಲಕ ಚಾಲನೆ ನೀಡಿದರು.

ಚುನಾವಣೆ ಅಧಿಕಾರಿಯಾಗಿ ಅಧ್ಯಾಪಕರಾದ ರಾಜೇಶ್ವರಿಎಂ. ಕಾರ್ಯನಿರ್ವಹಿಸಿದರು. ಅಧ್ಯಾಪಕ ವೃಂದದವರು ಸಹಕರಿಸಿದರು.