ಪೋಷಕರು ಮಕ್ಕಳಿಗೆ ತಮ್ಮ ಸಮಯವನ್ನು ಮೀಸಲಿಟ್ಟು ಮಕ್ಕಳನ್ನು ಈ ಸಮಾಜದ, ದೇಶದ ಸಂಪತ್ತು ಆಗುವಂತೆ ರೂಪಿಸಿ. ವಿಶ್ವದಲ್ಲಿ ಭಾರತವನ್ನು ಒಂದನೇ ಸ್ಥಾನಕ್ಕೆ ಮುಟ್ಟಿಸಬೇಕಾದರೆ ತರಗತಿ ಕೊಠಡಿ ಹಾಗೂ ಆಟದ ಮೈದಾನದಲ್ಲಿರುವ ಮಕ್ಕಳು ಬಲಿಷ್ಠ ವಾದರೆ ಮಾತ್ರ ಸಾಧ್ಯ. ನಮ್ಮೂರಿನ ಶಾಲೆ ನಮ್ಮೂರ ಆಸ್ತಿಯೆಂದು ಅಭಿವೃದ್ಧಿಪಡಿಸಿ ಎಂದು ಕರ್ನಾಟಕ ರಾಜ್ಯ ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾಯಲ್ಲಿ ನೂತನವಾಗಿ ನಿರ್ಮಾಣಗೊಂಡ ತರಗತಿ ಕೊಠಡಿ ಉದ್ಘಾಟನೆ ಹಾಗೂ ಶಾಲಾ ಉತ್ಸವ -2023 ಶಾಲಾ ವಾರ್ಷಿಕೋತ್ಸವ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 13.90 ಲಕ್ಷರು ವೆಚ್ಚದಲ್ಲಿ ವಿವೇಕ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡ ಕೊಠಡಿಯನ್ನು ಯು.ಟಿ. ಖಾದರ್ ಫರೀದ್, ಶತಮಾನ ಪೂರೈಸಿದ ಶಾಲೆಗೆ ಸರಕಾರದಿಂದ 17 ಲಕ್ಷ ಹಾಗೂ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಹಾಗೂ ಪ್ರತಾಪ್ ಸಿಂಹ ನಾಯಕ್ ರವರ ಅನುದಾನ ತಲಾ 5 ಲಕ್ಷದಂತೆ ನಿರ್ಮಾಣವಾದ ಎರಡು ಕೊಠಡಿಗಳನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ ಕೆ. ಹಾಗೂ, ಮಾಜಿ ಶಾಸಕ ರುಕ್ಮಯ ಪೂಜಾರಿ ಉದ್ಘಾಟಿಸಿದರು.
ಮಾಜಿ ಸಚಿವ ಬಿ. ರಮನಾಥ ರೈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಶಾಲೆ ಎಂಬುದು ಸರ್ವ ಧರ್ಮದ ದೇಗುಲ, ಉತ್ತಮ ವ್ಯಕ್ತಿಗಳನ್ನು ಸೃಷ್ಟಿ ಮಾಡುವ ದೇವ ಮಂದಿರ, ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳು ಶಾಲೆಯ ಬೆಳವಣಿಗೆಗೆ ಪೂರಕವಾಗಿದೆ, ಪೋಷಕರು ಕೇವಲ ಪ್ರೇಕ್ಷಕರಾಗದೆ ಶಾಲೆಯ ಬೆಳವಣಿಗೆಯಲ್ಲಿ ಪಾತ್ರಧಾರಿಗಳಾಗಬೇಕೆಂದು ಕರೆ ಕೊಟ್ಟರು.
ಮುಖ್ಯ ಅತಿಥಿಗಳಾದ ಮಾಜಿ ಶಾಸಕ ರುಕ್ಮಯ ಪೂಜಾರಿ ಮಾತನಾಡಿ ಮಕ್ಕಳಿಗೆ ವಿದ್ಯೆ ಮಾತ್ರ ಮುಖ್ಯವಲ್ಲ ಉತ್ತಮ ಸಂಸ್ಕಾರ ಮುಖ್ಯ, ಶಾಲೆಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಸುವ ತಾನವಾಗಲಿ ಎಂದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತನಾಡಿ ಮುಚ್ಚುವ ಹಂತಕ್ಕೆ ತಲುಪಿದ್ದ ಶಾಲೆ ಇಂದು ಈ ಅಂತಕ್ಕೆ ತಲುಪಲು ಕಾರಣಕರ್ತರಾದ ಎಲ್ಲರನ್ನೂ ಸ್ಮರಿಸಿ ಪೋಷಕರು ವಿಶ್ವಾಸವಿಟ್ಟು ತಮ್ಮ ಮಕ್ಕಳನ್ನು ಕಳುಹಿಸಿದ ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಕೊರತೆ ಆಗದಿರಲಿ ಎಂದರು.
ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಪದ್ಮನಾಭ ರೈ ಮಾತನಾಡಿ ಈ ಶಾಲೆಯಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಹತ್ತನೇ ತರಗತಿ ತನಕ ಶಿಕ್ಷಣ ಸಿಗುವಂತಾಗಬೇಕು ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ಬೇರೆ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿಯರನ್ನು, ತಾಲೂಕು ಜಿಲ್ಲಾ ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡ ವಿದ್ಯಾರ್ಥಿಗಳನ್ನು, ತರಬೇತಿಗೊಳಿಸಿದ ಶಾರೀರಿಕ ಶಿಕ್ಷಕಿಯನ್ನು, ಶಾಲಾ ಅಡುಗೆ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ನೋಟರಿ ನ್ಯಾಯವಾದಿ ಅಶ್ವಿನಿ ಕುಮಾರ್ ರೈ, ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ನಿರ್ದೇಶಕ ರಾಜಶೇಖರ್ ಜೈನ್, ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ಪ್ರವೀಣ್ ಕುಮಾರ್ ನಾಯ್ಕ್ ನೆಟ್ಲ ಮುಂಡಾಜೆ, ಶಾಲಾ ಶತಮಾನೋತರ ಬೆಳ್ಳಿ ಹಬ್ಬದ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಪ್ಲಾನೆಟ್ ಟೆಕ್ ಬೈಕಂಪಾಡಿಯ ಮೆನೇಜರ್ ಶಿವಪ್ರಸಾದ್ ವಿ ಕೆ, ಪ್ರೈಮಸಿ ಇಂಡಸ್ಟ್ರೀಸ್ ಬೈಕಂಪಾಡಿ ಮ್ಯಾನೇಜರ್ ಕೀರ್ತಿ ಕೆ. ಜೆ., ಪರಂಗಿಪೇಟೆ ಚೌಟ ಇಂಡಿಯನ್ ಗ್ಯಾಸ್ ಮಾಲಕ ಜಗನ್ನಾಥ್ ಚೌಟ ಬದಿಗುಡ್ಡೆ, ಗ್ರಾಮ ಪಂಚಾಯತ್ ಸದಸ್ಯರುಗಳಾದ ರಾಜೇಶ್ ಕೊಟ್ಟಾರಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಧುಸೂದನ್ ಐತಾಳ್, ಉಪಾಧ್ಯಕ್ಷ ಅಸ್ಮ, ಸದಸ್ಯರಾದ ಸುರೇಶ್, ಚಂದನ್ ಜೈನ್, ಜೀನತ್, ಶೈನಾಜ್, ದೀಪ್ತಿ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯತಿನ್ ಕುಮಾರ್, ಕಾರ್ಯದರ್ಶಿ ಸಲೀಂ, ಅಬೂಬಕ್ಕರ್,ಮೋಹನ್ ದಾಸ್ ಕೊಟ್ಟಾರಿ, ಕಬೀರ್ ಉಪಸ್ಥಿತರಿದ್ದರು.
ಬಳಿಕ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಶಾಲಾ ಮಕ್ಕಳು ಪ್ರಾರ್ಥನಾಗೀತೆ ಹಾಡಿದರು. ಮುಖ್ಯ ಶಿಕ್ಷಕ ಅಬೂಬಕರ್ ಅಶ್ರಫ್ ಸ್ವಾಗತಿಸಿ, ಹಿರಿಯ ಶಿಕ್ಷಕಿ ಸಿಂಥಿಯ ವಂದಿಸಿ, ಶಿಕ್ಷಕಿ ಸೌಮ್ಯರಾವ್ ಕಾರ್ಯಕ್ರಮ ನಿರೂಪಿಸಿದರು.