ಟೆಲ್‌ ಅವಿವ್‌: ಪುಟ್ಟ ದೇಶ ಇಸ್ರೇಲ್‌  ಇರಾನ್‌ ಮೇಲೆ ಇಷ್ಟೊಂದು ನಿಖರವಾಗಿ ದಾಳಿ ಮಾಡಿದರ ಹಿಂದೆ ಮೊಸಾದ್‌  ಮಹಿಳಾ ಗೂಢಚಾರಿಣಿ ಕೆಲಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಹೌದು. ಫ್ರಾನ್ಸ್‌ ಮೂಲದ ಕ್ಯಾಥರೀನ್ ಪೆರೆಜ್ ಶಕ್ಡಮ್ ಎಂಬಾಕೆ ಎರಡು ವರ್ಷದ ಹಿಂದೆ ಮೊಸಾದ್‌ನಿಂದ ತರಬೇತಿ ಪಡೆದು ರಹಸ್ಯವಾಗಿ ಇರಾನ್‌ ಪ್ರವೇಶಿಸಿದ್ದಳು. ನೋಡಲು ಸುಂದರವಾಗಿದ್ದ ಈಕೆ ಮೂಲತ: ಯಹೂದಿ. ಕ್ಯಾಥರೀನ್ ಶಿಯಾ ಇಸ್ಲಾಂಗೆ ಮತಾಂತರಗೊಂಡು ನಿಧಾನವಾಗಿ ಇರಾನಿನ ಉನ್ನತ ಅಧಿಕಾರಿಗಳು ಮತ್ತು ಅವರ ಕುಟುಂಬಗಳಿಗೆ ಹತ್ತಿರವಾಗಿದ್ದಳು.

ನಾನು ಇಸ್ಲಾಂ ಧರ್ಮದ ಬಗ್ಗೆ ಮತ್ತು ಇರಾನ್‌ ದೇಶದ ಆಡಳಿತದ ಬಗ್ಗೆ ಒಲವು ಹೊಂದಿದ್ದೇನೆ ಎಂದು ಹೇಳಿ ಇಸ್ಲಾ ಧರ್ಮ ನಿಯಮಗಳನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಳು. ಮತಾಂತರಗೊಂಡ ಬಳಿಕ ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿದ್ದ ಈಕೆ ಸರ್ಕಾರಿ ಅಧಿಕಾರಿಗಳ ಪತ್ನಿಯರನ್ನು ಭೇಟಿಯಾಗಿ ಮಾತನಾಡಲು ಆರಂಭಿಸಿದ್ದಳು. ನಂತರದ ದಿನಗಳಲ್ಲಿ ಈಕೆ ಎಷ್ಟು ವಿಶ್ವಾಸ ಗಳಿಸಿದ್ದಳು ಎಂದರೆ ಸೇನಾ ನಾಯಕರ ಮನೆಗೆ ನಿಯಮಿತ ಹೋಗುವ ಮಟ್ಟಕ್ಕೆ ಆಪ್ತತೆ ಬೆಳೆದಿತ್ತು. ಇದನ್ನೂ ಓದಿ : 7 ವರ್ಷದ ಬಾಲಕಿ ಮೇಲೆ ಅಪ್ರಾಪ್ತರಿಂದಲೇ ಅತ್ಯಾಚಾರ – ಇಬ್ಬರು ಬಾಲಕರು ಅರೆಸ್ಟ್‌

ಈಕೆಯ ಬರಹಗಳು ನಿಯಮಿತವಾಗಿ ಪ್ರೆಸ್ ಟಿವಿ, ಟೆಹ್ರಾನ್ ಟೈಮ್ಸ್ ಮತ್ತು ಖಮೇನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದವು. ಬರಹಗಾರ್ತಿ, ಪತ್ರಕರ್ತೆ ಮತ್ತು ಚಿಂತಕಿಯಾಗಿ ಪ್ರವೇಶಿಸಿದ್ದ ಕ್ಯಾಥರೀನ್ ಲೇಖನದ ಮೂಲಕ ಇರಾನಿನ ಸರ್ವೋಚ್ಚ ನಾಯಕ ಅಲಿ ಖಮೇನಿ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಳು.

ಸೇನೆಯಲ್ಲಿರುವ ಉನ್ನತ ನಾಯಕರ ಮನೆಗೆ ಅಷ್ಟು ಸುಲಭವಾಗಿ ಯಾರನ್ನು ಬಿಡುವುದಿಲ್ಲ. ಆದರೆ ಬಿಗಿ ಭದ್ರತೆ ಕಲ್ಪಿಸಿದ್ದ ಈ ಮನೆಗೆ ಕ್ಯಾಥರೀನ್ ಬಹಳ ಸಲೀಸಾಗಿ ಹೋಗುತ್ತಿದ್ದಳು. ಮನೆಗೆ ಭೇಟಿ ನೀಡುವುದರ ಜೊತೆಗೆ ಆಕೆ ಉನ್ನತ ಕಮಾಂಡರ್‌ಗಳ ಬಗ್ಗೆ ಗುಪ್ತಚರ ಮಾಹಿತಿಯನ್ನು ಸದ್ದಿಲ್ಲದೆ ಸಂಗ್ರಹಿಸುತ್ತಿದ್ದಳು. ಸೇನಾ ನಾಯಕರ ಮನೆ ಮಾತ್ರವಲ್ಲ ಸಾಮಾನ್ಯವಾಗಿ ಯಾರಿಗೂ ಪ್ರವೇಶ ಇಲ್ಲದ ಅಥವಾ ಕಠಿಣ ಪರಿಶೀಲನೆಯ ನಂತರ ಪ್ರವೇಶಿಸಬಹುದಾಗಿದ್ದ ಖಾಸಗಿ ಸ್ಥಳಗಳಿಗೆ ಈಕೆ ಬಹಳ ಸಲೀಸಲಾಗಿ ತೆರಳುತ್ತಿದ್ದಳು.

ಇರಾನ್‌ ಏಜೆನ್ಸಿಗಳು ಸಂದರ್ಶಕರ ಫೋನ್‌ ಇತ್ಯಾದಿಗಳನ್ನು ಪರಿಶೀಲಿಸುತ್ತಿದ್ದರೂ ಕ್ಯಾಥರೀನ್ ಸೂಕ್ಷ್ಮ ಪ್ರದೇಶಗಳಿಗೆ ತೆರಳಿ ರಹಸ್ಯ ಮಾಹಿತಿಯನ್ನು ಸಂಗ್ರಹಿಸಿ ನೇರವಾಗಿ ಮೊಸಾದ್‌ಗೆ ಕಳುಹಿಸುತ್ತಿದ್ದಳು. ಕಳೆದ ಮೂರು ವಾರಗಳಲ್ಲಿ ಸೇನಾ ಮುಖ್ಯಸ್ಥರಿಂದ ಹಿಡಿದು ಐಆರ್‌ಜಿಸಿ ನಾಯಕರವರೆಗೆ 9 ಉನ್ನತ ಇರಾನಿನ ಮಿಲಿಟರಿ ಕಮಾಂಡರ್‌ಗಳನ್ನು ಇಸ್ರೇಲ್ ಕೊಂದು ಹಾಕಿದೆ. ಪ್ರತಿ ಬಾರಿಯೂ, ಇಸ್ರೇಲಿ ಜೆಟ್‌ಗಳು ಈ ಅಧಿಕಾರಿಗಳು ನೆಲೆಸಿದ್ದ  ನಿಖರವಾಗಿ ಕಟ್ಟಡವನ್ನು ಗುರಿಯಾಗಿಸಿಕೊಂಡು ಮಾರಕ ದಾಳಿಗಳನ್ನು ನಡೆಸಿವೆ.

ಈಕೆ ಕಳುಹಿಸಿದ ಮಾಹಿತಿ ಆಧಾರದಲ್ಲೇ ಇಸ್ರೇಲ್‌ ಕೆಲ ದಿನಗಳಿಂದ ಸೇನಾ ನಾಯಕರ ಮತ್ತು ವಿಜ್ಞಾನಿಗಳ ಮನೆ ಮೇಲೆ ನಿಖರ ದಾಳಿ ಮಾಡಿರಬಹುದು ಎಂದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

ಇಸ್ರೇಲ್‌ ದಾಳಿ ಆರಂಭಿಸುತ್ತಿದ್ದಂತೆ ಸೇನಾ ನಾಯಕರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಸುರಕ್ಷಿತ ಸ್ಥಳಕ್ಕೆ ತೆರಳಿದ್ದರೂ ಇಸ್ರೇಲ್‌ ಆ ಜಾಗಕ್ಕೆ ನಿಖರವಾಗಿ ದಾಳಿ ಮಾಡಿ ಹತ್ಯೆ ಮಾಡುತ್ತಿತ್ತು.

ಇಸ್ರೇಲ್‌ ದಾಳಿಗೆ ಬೆಚ್ಚಿಬಿದ್ದ ಇರಾನ್‌ ಗುಪ್ತಚರ ಸಂಸ್ಥೆ ತನಿಖೆ ಆರಂಭಿಸಿತು. ತನಿಖೆ ಆರಂಭಿಸಿದಾಗ ಅಧಿಕಾರಿಗಳು ಕ್ಯಾಥರೀನ್ ಜೊತೆ ತೆಗೆಸಿದ್ದ ಫೋಟೋಗಳು ನಂತರ ಆಕೆ ನಿಯಮಿತವಾಗಿ ಮನೆಗೆ ಭೇಟಿ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ಬಯಲಾಗುತ್ತಿದ್ದಂತೆ ಇರಾನ್‌ ಆಕೆಯ ಪತ್ತೆಗೆ ಬಲೆ ಬೀಸಿದೆ. ಆದರೆ ಅಷ್ಟು ಹೊತ್ತಿಗಾಗಲೇ ಆಕೆ ಇರಾನ್‌ನಿಂದ ಕಣ್ಮರೆಯಾಗಿದ್ದಳು.

ಇರಾನ್‌ನ ಗುಪ್ತಚರ ಸಂಸ್ಥೆ ಈಕೆಯ ಪೋಸ್ಟರ್‌ಗಳು ಮತ್ತು ಫೋಟೋಗಳನ್ನು ದೇಶಾದ್ಯಂತ ಪ್ರಕಟಿಸಿ ಈಕೆಯ ಸುಳಿವು ನೀಡಬೇಕೆಂದು ಕೇಳಿಕೊಂಡಿದೆ. ಒಂದೋ ಆಕೆ ತನ್ನ ಗುರುತನ್ನು ಬದಲಾಯಿಸಿರಬೇಕು ಅಥವಾ ಬೇರೆ ದೇಶಕ್ಕೆ ತೆರಳಿರಬಹುದು ಎಂದು ವರದಿಯಾಗಿದೆ. ಇರಾನಿನ ಸಾಮಾಜಿಕ ಜಾಲತಾಣಗಳಲ್ಲಿ ಈಕೆಯ ಫೋಟೋಗಳು ಈಗ ವೈರಲ್‌ ಆಗಿದೆ.