ಭಾರತ ವಿದೇಶಾಂಗ ಸಚಿವಾಲಯ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಆಪರೇಷನ್ ಸಿಂಧೂರದ ಕುರಿತು ಮಹಿಳಾ ಅಧಿಕಾರಿಗಳಿಂದಲೇ ಮಾಹಿತಿ ನೀಡಿದರು. ಏಕೆಂದರೆ ಪಹಲ್ಗಾಮ್ ದಾಳಿಯಲ್ಲಿ 26 ಮಹಿಳೆಯರ ಸಿಂಧೂರ ಅಳಿಸಲಾಗಿತ್ತು, ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತ ಮಹಿಳಾ ಅಧಿಕಾರಿಗಳಿಂದಲೇ ದಾಳಿಯ ವಿವರ ಕೊಡಿಸಿದೆ.
2004ರ ಡಿ.18ರಲ್ಲಿ ಭಾರತೀಯ ವಾಯುಪಡೆಗೆ (IAF) ನಿಯೋಜನೆಗೊಂಡ ವ್ಯೂಮಿಕಾ ಸಿಂಗ್ ಅವರು ಪ್ರಸ್ತುತ ಅತ್ಯುತ್ತಮ ವಿಂಗ್ ಕಮಾಂಡರ್ಗಳಲ್ಲಿ ಒಬ್ಬರಾಗಿದ್ದಾರೆ. ಚೀತಾ, ಚೇತಕ್ನಂತಹ ಯುದ್ಧ ಹೆಲಿಕಾಪ್ಟರ್ಗಳನ್ನು ಹಾರಿಸುವಲ್ಲಿ ಪರಿಣತಿ ಹೊಂದಿದ್ದಾರೆ. ವಾಯುಪಡೆಗೆ ನಿಯೋಜನೆಗೊಂಡ ಆರಂಭದಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿದ್ದರು, ಸತತ ಕಠಿಣ ಪರಿಶ್ರಮದಿಂದ 13 ವರ್ಷಗಳ ಬಳಿಕ ಅಂದ್ರೆ 2017 ಡಿ.18ರಲ್ಲಿ ಇವರಿಗೆ ವಿಂಗ್ ಕಮಾಂಡರ್ ಹುದ್ದೆ ನೀಡಲಾಯಿತು. 2021ರಲ್ಲಿ ವ್ಯೋಮಿಕಾ ಸಿಂಗ್ ಮಣಿರಾಂಗ್ ಪರ್ವತ ಏರಿದ ವಾಯುಪಡೆಯ ಮಹಿಳಾ ವಿಭಾಗದ ಭಾಗವಾಗಿದ್ದರು. ಇದು ಐತಿಹಾಸಿಕ ಸಾಧನೆಯೂ ಆಗಿತ್ತು.
ವಿಂಗ್ ಕಮಾಂಡರ್ ವ್ಯೂಮಿಕಾ ಸಿಂಗ್ ಸಾವಿರಾರು ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. ಆದ್ರೆ ಇಂದಿನ ಸಾಧನೆ ಸಾಮಾನ್ಯವಾದುದ್ದಲ್ಲ, ಇದು 6ನೇ ತರಗತಿಯಲ್ಲೇ ಕಂಡ ಕನಸು, ಈ ಬಗ್ಗೆ ಹಿಂದೊಮ್ಮೆ ವ್ಯೂಮಿಕಾ ಅವರೇ ಹೇಳಿಕೊಂಡಿದ್ದರು. 6ನೇ ತರಗತಿಯಲ್ಲಿದ್ದಾಗ ನನ್ನ ಹೆಸರಿನ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಾನು ಅರ್ಥ ಕೇಳಿದಾಗ ವ್ಯೂಮಿಕಾ ಅಂದ್ರೆ ಆಕಾಶವನ್ನ ತನ್ನ ಮುಷ್ಟಿಯಲ್ಲಿ ಹಿಡಿದಿರುವವರು ಎಂದರ್ಥ ಅಂತ ಹೇಳಿದ್ದರು, ಈಗ ಆಕಾಶವೇ ನನ್ನದಾಗಿದೆ ಎಂದಿದ್ದರು ವ್ಯೂಮಿಕಾ.
ʻಆಪರೇಷನ್ ಸಿಂಧೂರʼದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಪ್ರಸ್ತುತ ಭಾರತೀಯ ಸೇನೆಯ ಸಿಗ್ನಲ್ಸ್ ದಳದ ಅಧಿಕಾರಿಯಾಗಿದ್ದಾರೆ. 2016 ರಲ್ಲಿ ಬಹುರಾಷ್ಟ್ರೀಯ ಮಿಲಿಟರಿ ವ್ಯಾಯಾಮದಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿಯಾಗಿ ಇತಿಹಾಸ ನಿರ್ಮಿಸಿದ್ದರು. ಆ ಸಮಯದಲ್ಲಿ ಭಾರತ ಆಯೋಜಿಸಿದ್ದ ಅತಿದೊಡ್ಡ ವಿದೇಶಿ ಮಿಲಿಟರಿ ಕವಾಯತಿನಲ್ಲಿ ಅವರು ಭಾರತದ ತಂಡವನ್ನು ಮುನ್ನಡೆಸಿದ್ದರಲ್ಲದೇ ಪಾಲ್ಗೊಂಡಿದ್ದ 18 ರಾಷ್ಟ್ರಗಳ ಪೈಕಿ ಏಕೈಕ ಮಹಿಳಾ ಕಮಾಂಡರ್ ಆಗಿದ್ದರು.
ಗುಜರಾತ್ ಮೂಲದ ಕರ್ನಲ್ ಸೋಫಿಯಾ ಖುರೇಷಿ (35 ವರ್ಷ) ಮೂಲತಃ ಮಿಲಿಟರಿ ಕುಟುಂಬಕ್ಕೆ ಸೇರಿದವರು. ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1999 ರಲ್ಲಿ ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಿಂದ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ಖುರೇಷಿ 2006 ರಲ್ಲಿ ಕಾಂಗೋದಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.