ಬಂಟ್ವಾಳ ತಾಲೂಕಿನಲ್ಲಿ ಡೆಂಗ್ಯೂ ಜ್ವರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಸ್ತೆ ಬದಿಯಲ್ಲಿ ನಿಂತ ನೀರಿನಿಂದಲೇ ಸೊಳ್ಳೆಗಳು ಉತ್ಪತ್ತಿಯಾಗುತ್ತಿದೆ ಎಂಬ ಆರೋಪಗಳು ಇದೀಗ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬಂದಿದೆ.
ಕೆ.ಎನ್.ಆರ್.ಸಿ ಕಂಪೆನಿಯ ಬೇಜಾವಬ್ದರಿತನದ ಕೆಲಸವೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಜಿಲ್ಲಾಧಿಕಾರಿಯವರೇ ಇವರ ಮೇಲೆ ಕಾನೂನು ಕ್ರಮ ವಹಿಸಿ ಎಂಬ ಆಕ್ರೋಶಭರಿತ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಅಗೆದು ಹಾಕಿದ್ದಲ್ಲದೆ ಪೂರ್ತಿಗೊಳಿಸದೆ ಅರ್ಧಂಬದ್ದ ಚರಂಡಿಗಳನ್ನು ನಿರ್ಮಿಸಿದ ಕಂಪೆನಿಯ ಅವಸ್ಥೆಯಿಂದ ಶುಚಿಯಾದ ಮಳೆ ನೀರು ನಿಂತಿದೆ.
ಮೆಲ್ಕಾರಿನಿಂದ ಉಪ್ಪಿನಂಗಡಿವರೆಗೆ ರಸ್ತೆಯ ಬದಿಯಲ್ಲಿ ಅಲ್ಲಲ್ಲಿ ನೀರು ನಿಂತಿದ್ದು ಶುದ್ದ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆಯಿಡಲು ಸಹಕಾರಿಯಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.
ಗ್ರಾ.ಪಂ.ಗಳು ಡೆಂಗ್ಯೂ ಜ್ವರ ಹರಡಂತೆ ಲಾರ್ವ ನಾಶಕ್ಕೆ ಕ್ರಮ ಕೈಗೊಳ್ಳಲು ಉಸ್ತುವಾರಿ ಸಚಿವರು ಅದೇಶ ನೀಡಿದ್ದಾರೆ ಆದರೂ ಕಾರ್ಯರೂಪಕ್ಕೆ ಬರುವಲ್ಲಿ ವಿಳಂಬವಾಗಿದೆ ಎಂದೇ ಹೇಳಬಹುದು.
ಇನ್ನೂ ಕೂಡ ಗ್ರಾ.ಪಂ.ಆಗಲಿ, ಆರೋಗ್ಯ ಇಲಾಖೆಯಾಗಲಿ ಇದರ ವಿರುದ್ಧದ ಕಾರ್ಯಕ್ರಮ ಹಾಕಿಕೊಳ್ಳುವ ಲ್ಲಿ ವಿಫಲರಾಗಿದ್ದಾರೆ, ಪುರಸಭೆ ಸಹಿತ ಗ್ರಾಮೀಣ ಭಾಗದ ಅನೇಕ ಕಡೆಗಳಲ್ಲಿ ಜ್ವರ ಬಾಧಿತರ ಸಂಖ್ಯೆ ಉಲ್ಬಣಗೊಂಡಿದ್ದು ಹೆಚ್ಚಿನವರು ಖಾಸಗಿ ಆಸ್ಪತ್ರೆಗಳಿಂದ ಔಷಧಿಯನ್ನು ಪಡೆದುಕೊಂಡಿದ್ದರೆ ಇನ್ನು ಕೆಲವರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಖಾಸಗಿ ವೈದ್ಯರು ಹೇಳುವ ಪ್ರಕಾರ ಕಳೆದ ಮೇ ತಿಂಗಳಿನಿಂದ ನಿರಂತರವಾಗಿ ಜುಲೈ ಈವರೆಗೆ ಡೆಂಗ್ಯೂ ಜ್ವರ ಬಾಧಿತರು ಬರುತ್ತಿದ್ದು ಅವರೆಲ್ಲರಲ್ಲಿಯೂ ಪ್ಲೇಟ್ ಲೆಟ್ ಕೌಂಟ್ ಕಡಿಮೆಗೊಳ್ಳುತ್ತಿದ್ದು ಅವರಿಗೆ ಅಗತ್ಯ ಔಷಧಿಗಳನ್ನು ನೀಡಿದ ಬಳಿಕವೇ ಅವರು ಸುಧಾರಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.
ಆದರೆ ಸರಕಾರಿ ವೈದ್ಯಕೀಯ ವ್ಯವಸ್ಥೆಯಲ್ಲಿ ಎಲ್ಲವೂ ಡೆಂಗ್ಯೂ ಅಲ್ಲ, ವೈರಲ್ ಜ್ವರವೂ ಹೆಚ್ಚಾಗಿದೆ. ಎಲಿಝಾ ಪರೀಕ್ಷೆ ನಡೆಸಿದರೆ ಮಾತ್ರ ಡೆಂಗ್ಯೂ ಜ್ವರದ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಗುತ್ತದೆ ಎಂಬುದು ಅವರ ವಾದ. ಒಟ್ಟಿನಲ್ಲಿ ಕಳೆದ ಕೆಲವು ತಿಂಗಳಿನಿಂದ ಜ್ವರಕ್ಕೆ ತುತ್ತಾಗಿ ಅನೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ.