ಹಾಸನದಲ್ಲಿ ಇಂದು ವಿವಿಧ ಇಲಾಖೆಗಳಡಿ ಅನುಷ್ಠಾನಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಹೊಸ ಕಾಮಗಾರಿಗಳಿಗೆ ಸಿ.ಎಂ.ಸಿದ್ಧರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು.

ಬಳಿಕ ಮಾತನಾಡಿ ರಾಜ್ಯದಲ್ಲಿ ಜನರ ತಲಾ ಆದಾಯ ಹೆಚ್ಚಳವಾಗಿದೆ. ಇದಕ್ಕೆ ಜಿಡಿಪಿ ಬೆಳವಣಿಗೆಗೆ ರಾಜ್ಯದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಕಾರಣ. ಇಡೀ ದೇಶದಲ್ಲಿ 18% GDP ಬೆಳವಣಿಗೆ ಆಗಿ ದೇಶದ ಅಭಿವೃದ್ಧಿಗೆ ಅತಿ ಹೆಚ್ಚು ಕೊಡುಗೆ ನೀಡಿದ ಪ್ರಥಮ ರಾಜ್ಯ ನಮ್ಮದಾಗಿದೆ. ಈ ಬೆಳವಣಿಗೆ ನಮ್ಮ ಗ್ಯಾರಂಟಿ ಯೋಜನೆಗಳ ಫಲ ಎಂಬುದನ್ನು ಅಂಕಿಅಂಶಗಳೇ ತೋರಿಸುತ್ತದೆ ಎಂದರು.

ಹಾಸನ ಜಿಲ್ಲೆಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಿದ್ದಕ್ಕಾಗಿ ರೂ.166 ಕೋಟಿ ಕೊಟ್ಟಿದ್ದೇವೆ. ಈ ಮಟ್ಟದ ಹಣ ಹಾಸನ ಮಹಿಳೆಯರಿಗೆ ಉಳಿತಾಯವಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಹಾಸನ ಜಿಲ್ಲೆಯ ಮಹಿಳೆಯರಿಗೆ ರೂ.477 ಕೋಟಿ ನೀಡಿದ್ದೇವೆ. ಈ ಹಣವೂ ಮಹಿಳೆಯರ ಖಾತೆಗೆ ನೇರವಾಗಿ ಹೋಗಿದೆ.

ಉಚಿತ ವಿದ್ಯುತ್ ನಿಂದಾಗಿ ಹಾಸನ ಜಿಲ್ಲೆಯೊಂದರಲ್ಲೇ 89 ಕೋಟಿ ರೂಪಾಯಿ ಹಣ ಜನರಿಗೆ ಉಳಿತಾಯವಾಗಿದೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ ರೂ.135 ಕೋಟಿ ಹಣ ಹಾಸನ ಜಿಲ್ಲೆಗೆ ನೀಡಲಾಗಿದೆ. ಯುವನಿಧಿಯಡಿ ನೋಂದಣಿ ಮಾಡಿದವರಿಗೂ ಹಣ ಹಾಕಲಾಗುತ್ತಿದೆ. ಹೀಗೆ ಪ್ರತೀ ಒಂದೊಂದು ಗ್ಯಾರಂಟಿ ಯೋಜನೆಯಲ್ಲಿ ಜಿಲ್ಲೆಯ ಜನರಿಗೆ ನೂರಾರು ಕೋಟಿ ಹಣ ಉಳಿತಾಯವಾಗಿದೆ.

ಗ್ಯಾರಂಟಿ ಯೋಜನೆಗಳ ಮೂಲಕ ಜಿಲ್ಲೆಯ ಜನರ ಖಾತೆಗೆ ಬಂದ ಹಣದಿಂದಾಗಿ ಅವರಲ್ಲಿ ಕೊಳ್ಳುವ ಶಕ್ತಿ, ಉಳಿತಾಯದ ಶಕ್ತಿ ಹೆಚ್ಚಾಗಿದೆ. ಇದರ ಒಟ್ಟು ಪರಿಣಾಮ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ ತೀವ್ರಗೊಂಡು ಆರ್ಥಿಕ ಪ್ರಗತಿ ಕಂಡಿದೆ.

ಮಹಿಳೆಯರು, ರೈತರು, ಕಾರ್ಮಿಕರು, ಹಿಂದುಳಿದವರು, ದುಡಿಯುವವರು, ಶ್ರಮಿಕರು ಎಲ್ಲರಿಗೂ ಅನುಕೂಲ ಆಗುವ ಜಾತಿ, ಧರ್ಮದ ಮಿತಿ ಇಲ್ಲದ ಕಾರ್ಯಕ್ರಮಗಳನ್ನು ನಾವು ರೂಪಿಸಿ, ಜಾರಿ ಮಾಡಿದ್ದೇವೆ ಎಂದರು.

ನಮ್ಮ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರು ನೆಮ್ಮದಿ ಕಂಡುಕೊಳ್ಳುತ್ತಿದ್ದಾರೆ. ಈ ಫಲಾನುಭವಿಗಳ ಗಮನ ಬೇರೆಡೆ ಸೆಳೆಯಲು @BJP4Karnataka ನಾನಾ ನಾಟಕಗಳನ್ನು ಸೃಷ್ಟಿಸುತ್ತಿದೆ, ಭರ್ಜರಿ ನಾಟಕ ಆಡುತ್ತಿದೆ. ಬಿಜೆಪಿಯ ಟೀಕೆ, ನಾಟಕಗಳಿಗೆ ಮರುಳಾಗಬೇಡಿ ಎಂದು ಮನವಿ ಮಾಡಿದರು.

ಹಾಸನದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಏರ್ ಪೋರ್ಟ್ ನಿರ್ಮಾಣಕ್ಕೆ ರಾಜ್ಯದ ಪಾಲಿನ ಹಣವನ್ನು ನಿರಂತರವಾಗಿ ನೀಡುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಪಕ್ಷ ರಾಜಕಾರಣಕ್ಕೆ ಅವಕಾಶ ಕೊಡದೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಆಧ್ಯತೆ ನೀಡಲಾಗುವುದು ಎಂದರು.