ಶಿವಲಿಂಗೇಗೌಡರು ಕ್ಷೇತ್ರದ ಜನಪರ – ಅಭಿವೃದ್ಧಿ ಕೆಲಸ ಮಾಡುವುದರಲ್ಲಿ, ವಿಧಾನಸಭೆಯಲ್ಲಿ ಪಕ್ಷ ಮತ್ತು ಸರ್ಕಾರದ ಕಾರ್ಯಗಳನ್ನು ಸಮರ್ಥವಾಗಿ ಮಂಡಿಸುವುದರಲ್ಲೂ ಮುಂದಿದ್ದಾರೆ. ₹148 ಕೋಟಿ ವೆಚ್ಚದಲ್ಲಿ 10 ಕೆರೆಗಳ ನೀರು ತುಂಬಿಸುವ, ಕುಡಿಯುವ ನೀರು ಕೊಡುವ ಪುಣ್ಯದ ಕೆಲಸವನ್ನು ಶಿವಲಿಂಗೇಗೌಡರು ಮಾಡಿದ್ದಾರೆ. ನಾಲ್ಕು ಬಾರಿ ಶಾಸಕರಾಗಿರುವ ಶಿವಲಿಂಗೇಗೌಡರು ಮುಂದಿನ ಚುನಾವಣೆಯಲ್ಲೂ ಗೆಲ್ಲುವುದು ಶತಸಿದ್ಧ  ಎಂದು ಮುಖ್ಯಮಂತ್ತಿಗಳಾದ ಸಿದ್ಧರಾಮಯ್ಯ ಅವರು ಹೇಳಿದರು.  ಇದನ್ನೂ ಓದಿ : ಭಾರತ-ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 60 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ
 
ಅವರು ಹಾಸನ ಜಿಲ್ಲೆ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ತಲಾ ಆದಾಯದಲ್ಲಿ ಇಡಿ ದೇಶದಲ್ಲಿ ನಂಬರ್ ಒನ್ ಆಗಿದೆ. ಇದಕ್ಕೆ ಪ್ರಮುಖ ಕಾರಣ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿರುವುದು. ಕೊಳ್ಳುವ ಶಕ್ತಿ ಹೆಚ್ಚಾಗಲು ನಮ್ಮ ಗ್ಯಾರಂಟಿ ಯೋಜನೆಗಳು ಪ್ರಮುಖ ಕಾರಣ. ಬಿಜೆಪಿಯವರಿಗೆ ಆರ್ಥಿಕತೆ ಅರ್ಥ ಆಗುವುದಿಲ್ಲ. ಅದಕ್ಕೇ ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಸುಳ್ಳು, ಅಪಪ್ರಚಾರ ಮಾಡುತ್ತಿದ್ದಾರೆ. ರಾಜಕೀಯ ಪ್ರೇರಿತ ಸುಳ್ಳುಗಳನ್ನು ಹೇಳಿ ರಾಜ್ಯದ ಜನರ ದಾರಿ ತಪ್ಪಿಸುವ ಯತ್ನ ಮಾಡಿದರೂ ರಾಜ್ಯದ ಜನತೆ ಯಾಮಾರುವುದಿಲ್ಲ.
ಸರ್ಕಾರದ ಸಾಧನಾ ಸಮಾವೇಶದಲ್ಲಿ ಲಕ್ಷ ಲಕ್ಷ ಜನ ಫಲಾನುಭವಿಗಳು ಸೇರಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇದು ನುಡಿದಂತೆ ನಡೆದ ನಮ್ಮ ಸರ್ಕಾರದ ಸಾಧನೆ. ನಾವು ಅಭಿವೃದ್ಧಿ ಯೋಜನೆಗಳಿಗೆ 1.20 ಲಕ್ಷ ಕೋಟಿ ಖರ್ಚು ಮಾಡುವುದರ ಜೊತೆಗೆ ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ಖರ್ಚು ಮಾಡಿ ಜನರ ಮನೆ ಬಾಗಿಲಿಗೆ ಅಭಿವೃದ್ಧಿ ಕಾರ್ಯಗಳನ್ನು ತಲುಪಿಸಿದ್ದೇವೆ.
ಶಿವಲಿಂಗೇಗೌಡರಿಗೆ ರಾಜಕೀಯ ಭವಿಷ್ಯವಿದೆ. ಮಂತ್ರಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ. ಜೊತೆಗೆ ಕ್ಷೇತ್ರದ ಜನರ ಆಶೀರ್ವಾದವೂ ಗಟ್ಟಿಯಾಗಿದೆ. ಈ ಕಾರಣಕ್ಕೇ ನಾಲ್ಕು ಬಾರಿ ಗೆದ್ದಿರುವ ಶಿವಲಿಂಗೇಗೌಡರು ಮುಂದಿನ ಬಾರಿಯೂ ಗೆದ್ದು ಬರುತ್ತಾರೆ. ಆದರೆ ಕೆಲವೊಂದು ರಾಜಕೀಯ ಸಂಗತಿಗಳನ್ನು ಬಹಿರಂಗವಾಗಿ ಚರ್ಚಿಸಲು ಸಾಧ್ಯವಿಲ್ಲ.
ದೆಹಲಿಯಲ್ಲಿ ನಡೆದ ಹಿಂದುಳಿದ ವರ್ಗಗಳ ನಾಯಕರ ಸಮ್ಮೇಳನದಲ್ಲಿ ರಾಹುಲ್ ಗಾಂಧಿಯವರು “ಹಿಂದುಳಿದ ಸಮುದಾಯಗಳ ಬಗ್ಗೆ ತಮ್ಮ ಗ್ರಹಿಕೆಯನ್ನು ಸ್ಪಷ್ಟಪಡಿಸಿದ್ದಾರೆ”. ಹಿಂದುಳಿದ ವರ್ಗಗಳು, ಮಹಿಳೆಯರು, ದಲಿತರು, ಶೋಷಿತರು, ಎಲ್ಲಾ ಜಾತಿಯ ಬಡವರ ಬದುಕಿಗೆ ಬೇಕಾದ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ರೂಪಿಸಿದೆ.
ನಮ್ಮದು ಸಾಮಾಜಿಕ ನ್ಯಾಯ ಮತ್ತು ಬಡವರ ಪ್ರಗತಿಗಾಗಿ, ಸಂವಿಧಾನದ ಮೌಲ್ಯಗಳ ಈಡೇರಿಕೆಗಾಗಿ ಕಾರ್ಯಕ್ರಮ ರೂಪಿಸಿ ಜಾರಿ ಮಾಡುವ ಏಕೈಕ ಪಕ್ಷ. ದೇಶದಲ್ಲಿ, ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಕಾರ್ಯಗಳನ್ನು ಜಾರಿ ಮಾಡಿರುವುದು ನಮ್ಮ ಪಕ್ಷ ಮಾತ್ರ ಎಂದರು.