ಕಾರವಾರ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ನಡೆದ ಕಾಲ್ತುಳಿತ (Stampede) ಘಟನೆಯಲ್ಲಿ ಉತ್ತರ ಕನ್ನಡ  ಜಿಲ್ಲೆಯ ಸಿದ್ದಾಪುರ ನಗರದ ಅಕ್ಷತಾ (27) ಮೃತಪಟ್ಟಿದ್ದು, ಆಕೆಯ ಮೃತದೇಹ ಸಿದ್ದಾಪುರಕ್ಕೆ ಆಗಮಿಸಿದ್ದು, ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

ಮೂಲತಃ ಅಕ್ಷತಾ ಮಂಗಳೂರಿನ  ಮೂಲ್ಕಿಯವರಾಗಿದ್ದು ಸಿಎ ಪರೀಕ್ಷೆಯಲ್ಲಿ ಚಿನ್ನದ ಪದಕ ವಿಜೇತೆಯಾಗಿದ್ದರು. ಒಂದೂವರೆ ವರ್ಷದ ಹಿಂದೆ ಎಂಜಿನಿಯರ್ ಆಗಿರುವ ಸಿದ್ದಾಪುರ ನಗರದ ಆಶಯ್ ಅವರೊಂದಿಗೆ ವಿವಾಹವಾಗಿದ್ದರು. ಇದನ್ನೂ ಓದಿ : ಕಾಲ್ತುಳಿತ ಪ್ರಕರಣ – ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಹೈಕೋರ್ಟ್

ಗಂಡ ಹೆಂಡತಿ ಇಬ್ಬರೂ ಆರ್‌ಸಿಬಿ (RCB) ಅಭಿಮಾನಿಗಳಾಗಿದ್ದರು. ಹೀಗಾಗಿ ಬುಧವಾರ ಮಧ್ಯಾಹ್ನ ಕಚೇರಿಗೆ ರಜೆ ಹಾಕಿ, ಇಬ್ಬರೂ ಆರ್‌ಸಿಬಿ ಟೀಶರ್ಟ್ ಧರಿಸಿ ರೋಡ್ ಶೋಗೆ ಭಾಗವಹಿಸಲು ತೆರಳಿದ್ದರು. ರೋಡ್ ಶೋ ಕ್ಯಾನ್ಸಲ್ ಆಗಿದ್ದರಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಇಬ್ಬರೂ ತೆರಳಿದ್ದರು.

ಕ್ರೀಡಾಂಗಣದ ಗೇಟ್ ನಂಬರ್ 17ರಿಂದ ದಂಪತಿ ಒಳಗೆ ಹೋಗುತ್ತಿದ್ದರು. ಈ ಕಾಲ್ತುಳಿತ ಉಂಟಾದಾಗ ಅಕ್ಷತಾ, ಆಶಯ್‌ನಿಂದ ಬೇರ್ಪಟ್ಟಿದ್ದರು. ಈ ವೇಳೆ ಇಬ್ಬರೂ ಕಾಲ್ತುಳಿತಕ್ಕೊಳಗಾದರೂ ಓರ್ವ ಮಹಿಳೆ, ಆಶಯ್‌ರನ್ನು ರಕ್ಷಣೆ ಮಾಡಿದ್ದರು. ಆದರೆ ಅಕ್ಷತಾ ಜನರ ಕಾಲಡಿ ಸಿಕ್ಕಿ ಅಲ್ಲಿಯೇ ಮೃತಪಟ್ಟಿದ್ದರು.

ಇನ್ನು ಅಕ್ಷತಾ ಆರ್‌ಸಿಬಿ ಟೀಶರ್ಟ್  ಧರಿಸಿದ್ದರಿಂದ ಆಶಯ್ ಪತ್ನಿಯ ಗುರುತುಹಿಡಿದರು. ಆ ವೇಳೆಗಾಗಲೇ ಅಕ್ಷತಾ ಮೃತಪಟ್ಟಿದ್ದರು. ಇದೀಗ ಅಕ್ಷತಾ ಅವರ ಮೃತದೇಹವನ್ನು ಪತಿಯ ಮನೆಗೆ ತರಲಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.