ಶ್ರೀನಗರ: ಪಾಕಿಸ್ತಾನದ ಬಳಿ ಪರಮಾಣು ಶಸ್ತ್ರಾಸ್ತ್ರಗಳು ಇದ್ದರೆ ಸುರಕ್ಷಿತವೇ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಪ್ರಶ್ನಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾದ 5 ದಿನಗಳ ಬಳಿಕ ಗುರುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ರೀನಗರಕ್ಕೆ  ಭೇಟಿ ನೀಡಿದರು. ಶ್ರೀನಗರದಲ್ಲಿರುವ 15 ಕಾರ್ಪ್ಸ್ ಪ್ರಧಾನ ಕಚೇರಿಗಳಿಗೆ ಭೇಟಿ ನೀಡಿ, ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ಭೇಟಿ ವೇಳೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ  ಜೊತೆಗಿದ್ದರು.

ಪಾಕ್‌ನ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ದಾಳಿಯ ಕುರಿತು ಪರಿಶೀಲನೆ ನಡೆಸುತ್ತಿರುವ ವೇಳೆ ಮಾತನಾಡಿದ ಅವರು, ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವ ಸಾಮರ್ಥ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದು, ಈ ಕುರಿತು ಮೇಲ್ವಿಚಾರಣೆ ನಡೆಸಲು ಅಂತರರಾಷ್ಟ್ರೀಯ ಹಸ್ತಕ್ಷೇಪಕ್ಕೆ ಕರೆ ನೀಡಿದರು. ನಮ್ಮ ಸೇನೆ ಹೊಂದಿರುವ ಗುರಿ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ. ಇಂದು ಭಾರತ ಭಯೋತ್ಪಾದನೆಯ ವಿರುದ್ಧ ಪ್ರತಿಜ್ಞೆ ಮಾಡಿದ್ದು, ಅದು ಎಷ್ಟು ದೃಢವಾಗಿದೆ ಎಂದರೆ ನಾವು ಪರಮಾಣು ಬೆದರಿಕೆ ಬಗ್ಗೆಯೂ ತಲೆ ಕೆಡಿಕಿಕೊಳ್ಳುವುದಿಲ್ಲ. ಪಾಕಿಸ್ತಾನ ಎಷ್ಟು ಬೇಜವಾಬ್ದಾರಿಯಿಂದ ಬೆದರಿಕೆ ಹಾಕಿದೆ ಎಂಬುವುದನ್ನು ಇಡೀ ಜಗತ್ತು ನೋಡಿದೆ. ಆದರೆ ಇಂದು ಆ ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಇರುವುದು ಸುರಕ್ಷಿತವೇ ಎನ್ನುವ ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ ಎಂದರು.

ಭದ್ರತೆ, ಭಾರತೀಯ ಸಶಸ್ತ್ರ ಪಡೆಗಳ ಯುದ್ಧ ತಯಾರಿ, ಗಡಿಭಾಗದಲ್ಲಿ ಪಾಕ್ ಶೆಲ್ ದಾಳಿ ನಡೆಸಿದ ಪ್ರದೇಶಗಳನ್ನು ಪರಿಶೀಲಿಸಿ, ಭಯೋತ್ಪಾದನೆ ಹಾಗೂ ಭಯೋತ್ಪಾದಕರ ವಿರುದ್ಧ ಹೋರಾಡುವ ನಮ್ಮ ಯೋಧರಿಗೆ ಹಾಗೂ ಪಹಲ್ಗಾಮ್‌ನಲ್ಲಿ ಪ್ರಾಣ ಕಳೆದುಕೊಂಡ ನಾಗರಿಕರಿಗೆ ನಾನು ತಲೆಬಾಗುತ್ತೇನೆ. ಗಾಯಗೊಂಡ ಸೈನಿಕರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪಾರ್ಥಿಸುತ್ತೇನೆ ಎಂದರು.

ಆಪರೇಷನ್ ಸಿಂಧೂರ ಇದು ಭಯೋತ್ಪಾದನೆಯ ವಿರುದ್ಧ ಭಾರತದ ಅತಿದೊಡ್ಡ ಕಾರ್ಯಾಚರಣೆ. ಭಯೋತ್ಪಾದನೆಯನ್ನು ಕೊನೆಗೊಳಿಸಲು ನಾವು ಯಾವುದೇ ಹಂತಕ್ಕೂ ಹೋಗಲು ಸಿದ್ಧ. ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.