ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ‘ಮನೆ-ಮನೆಗೆ ಪೊಲೀಸ್’ ವಿನೂತನ ಕಾರ್ಯಕ್ರಮಕ್ಕೆ ಬೆಂಗಳೂರಿನ ಗೋವಿಂದರಾಜನಗರದಲ್ಲಿ ಚಾಲನೆ ನೀಡಿದೆ. ಬೆಂಗಳೂರು ಪೊಲೀಸರು ಹೊರತಂದಿರುವ ‘ಮನೆ ಮನೆಗೆ ಪೊಲೀಸ್’ ಕೈಪಿಡಿಯನ್ನುಗೃಹ ಸಚಿವ ಡಾ| ಜಿ.ಪರಮೇಶ್ವರ್‌ ಅವರು ಬಿಡುಗಡೆ ಮಾಡಿದರು.
ನಮ್ಮ ಸರ್ಕಾರವು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ, ಸಮಾಜದಲ್ಲಿ ನಿರ್ಭಯ ವಾತಾವರಣ ನಿರ್ಮಾಣ ಮಾಡಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರ ಸಮನ್ವಯತೆ ಅತ್ಯಗತ್ಯ.

ದೇಶದಲ್ಲಿ ಪ್ರಥಮ ಬಾರಿಗೆ ಮನೆ ಮನೆಗೆ ಪೊಲೀಸ್ ವಿನೂತನವಾದ ಕಾರ್ಯಕ್ರಮ ಮಾಡಲಾಗುತ್ತಿದೆ. ಇನ್ನು ಮುಂದೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ರಾಜ್ಯದಾದ್ಯಂತ ಮನೆ ಮನೆಗೆ ಭೇಟಿ ನೀಡಿ, ಸಾರ್ವಜನಿಕರ ದೂರುಗಳನ್ನು ಆಲಿಸಿ, ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಲ್ಪಿಸಲು ಪ್ರಯತ್ನಿಸಲಿದ್ದಾರೆ. ನಿಮಗೆ ಯಾರಿಂದಲೂ ತೊಂದರೆ, ದೌರ್ಜನ್ಯ, ಮೋಸ ಹೋಗಿದ್ದರೆ, ನೆರೆಹೊರೆಯಲ್ಲಿ ಕಂಡುಬರುವ ಕಾನೂನು ಬಾಹಿರ ಚಟುವಟಿಕೆಗಳ ಕುರಿತು ಯಾವುದೇ ಆತಂಕವಿಲ್ಲದೆ ಮುಕ್ತ ಮನಸ್ಸಿನೊಂದಿಗೆ ನಿಮ್ಮ ಸಮಸ್ಯೆಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳಿ ಎಂದರು.

ನಿಮ್ಮ ಸಹಕಾರವಿದ್ದರೆ ಎಂತಹ ಅಪರಾಧಗಳನ್ನಾದರೂ ತಡೆಗಟ್ಟಬಹುದು. ಅಪರಾಧಗಳಾಗುವ ಮುನ್ನವೇ ಅಪರಾಧಗಳನ್ನು ಮಟ್ಟ ಹಾಕಲು ಪೊಲೀಸರಿಗೆ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ. ಇದನ್ನು ಸರ್ಕಾರ ಅರಿತುಕೊಂಡೆ ‘ಮನೆ ಮನೆಗೆ ಪೊಲೀಸ್’ ಅರ್ಥಪೂರ್ಣ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ರಾಜ್ಯದ ಎಲ್ಲ ನಾಗರಿಕರು ಈ ಕಾರ್ಯಕ್ರಮಕ್ಕೆ ಕೈಜೋಡಿಸಿ.

 ಈ ಸಂದರ್ಭದಲ್ಲಿ ಗೋವಿಂದರಾಜನಗರ ಶಾಸಕರಾದ ಪ್ರಿಯಕೃಷ್ಣ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬಿಬಿಎಂಪಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಬೆಂಗಳೂರು ನಗರ ಪೊಲೀಸ್ ಅಸಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.