ಬಂಟ್ವಾಳ: ಕರ್ನಾಟಕ ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದ ವತಿಯಿಂದ ಬಿ.ಸಿ.ರೋಡ್ ನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಮತ್ತು ಇನ್ವರ್ಟರ್, ಯುಪಿಎಸ್ ಕೊಡುಗೆ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ಶಾಲೆಯಲ್ಲಿ ನಡೆಯಿತು.

ಸಂಘದ ಜಿಲ್ಲಾಧ್ಯಕ್ಷ ಆನಂದ ಕುಮಾರ್ ಅವರು ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮೀ ಕೆ. ಅವರಿಗೆ ಕೊಡುಗೆಯನ್ನು ಹಸ್ತಾಂತರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ ಮಾಂಬಾಡಿ ಮಾತನಾಡಿ, ಭೂಮಾಪನ ಕಾರ್ಯನಿರ್ವಾಹಕ ನೌಕರರ ಸಂಘ ಇತರ ಸಂಘಟನೆಗಳಿಗೆ ಮಾದರಿಯಾಗುವ ಕಾರ್ಯ ಮಾಡುತ್ತಿದ್ದು, ಬಿ.ಮೂಡ ಶಾಲೆಯಲ್ಲಿ ಕಂಪ್ಯೂಟರ್ ಉಚಿತ ತರಗತಿ ಆರಂಭಗೊಳ್ಳಲು ಪ್ರೇರಣೆಯಾಗಿದೆ.

ತರಗತಿಗೆ ಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸುವ ಮೂಲಕ ಬಡ ವಿದ್ಯಾರ್ಥಿಗಳೂ ಆಧುನಿಕ ವ್ಯವಸ್ಥೆಯನ್ನು ಅರಿತುಕೊಳ್ಳುವ ಮೂಲಕ ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳಲು ಅನುಕೂಲವಾಗಿದೆ ಎಂದು ಹೇಳಿದರು.

ಈಗಾಗಲೇ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ನೆತ್ತರ ಎಂಬಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಇಂಗ್ಲೀಷ್ ಬೋಧಿಸುವ ಅತಿಥಿ ಶಿಕ್ಷಕರಿಗೆ ಗೌರವಧನ, ಬೇಸಿಗೆ ಶಿಬಿರ ಆಯೋಜನೆ, ನೀರಿನ ಟ್ಯಾಂಕ್, ನೋಟ್ ಬುಕ್ ವಿತರಿಸುವ ಮೂಲಕ ಸಂಘ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಮಂಗಳೂರಿನ ಬಿಇಒಂ ಶಾಲೆ ಪ್ರಯೋಗಾಲಯಕ್ಕೆ ವಿಜ್ಞಾನ ಉಪಕರಣಗಳಿಗೆ ಸಹಾಯಧನ ಕೊಡುಗೆ ಇದು ಇತರೆ ಸಂಘಗಳಿಗೂ ಮಾದರಿಯಾಗಿದೆ, ವೆನ್ಲಾಕ್ಆಸ್ಪತ್ರೆ ರಾತ್ರಿಯೂಟದ ಎಂಫ್ರೆಂಡ್ಸ್ ಯೋಜನೆಗೆ ನೆರವು ಮೂಲಕ ಸಮಾಜಮುಖಿ ಕಾರ್ಯಗಳನ್ನು ಸಂಘ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಕರ್ನಾಟಕ ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಘವೇಂದ್ರ ರಾವ್, ಜಿಲ್ಲಾ ಸಂಘದ ಕಾರ್ಯದರ್ಶಿ ಎಂ.ಎಸ್. ಲೋಕೇಶ್, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಮಮತಾ, ಎಸ್.ಡಿ.ಎಂ.ಸಿ ಸದಸ್ಯರಾದ ಕಿಶೋರ್ ಕುಲಾಲ್, ವಿನೋದಾ, ಕಂಪ್ಯೂಟರ್ ತರಬೇತುದಾರ ಶಿವಮೂರ್ತಿ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಲಕ್ಷ್ಮೀ ಕೆ. ಸ್ವಾಗತಿಸಿದರು. ಶಿಕ್ಷಕಿಯರಾದ ಪೂರ್ಣಿಮಾ, ಲಾವಣ್ಯ ಮತ್ತು ನಿಶ್ಮಿತಾ ಸಹಕರಿಸಿದರು.

ಸಹಶಿಕ್ಷಕಿ ತಾಹಿರಾ ಬಿ ವಂದಿಸಿದರು. ಸಹಶಿಕ್ಷಕಿ ಹೇಮಾವತಿ ಕಾರ್ಯಕ್ರಮ ನಿರ್ವಹಿಸಿದರು.