ಬಂಟ್ವಾಳ: ಗ್ರಾಮಸ್ಥರು ಭಾಗವಹಿಸದೆ ಇರುವ ಗ್ರಾಮಸಭೆ ಅಪೂರ್ಣ ಗ್ರಾಮ ಸಭೆ, ಎಂದು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಹೇಳಿದರು.
ಅವರು ಸೋಮವಾರ ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ರೋಟರಿ ಸಭಾ ಭವನದಲ್ಲಿ ನಡೆದ ನರಿಕೊಂಬು ಹಾಗೂ ಶಂಬುರು ಗ್ರಾಮಗಳನ್ನು ಒಳಗೊಂಡ ನರಿಕೊಂಬು ಪಂಚಾಯತ್ ನ ದ್ವಿತೀಯ ಸುತ್ತಿನ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮಸ್ಥರಿಗೆ ವಿವಿಧ ಇಲಾಖೆಗಳ ಮಾಹಿತಿ ನೀಡುವ ಸಲುವಾಗಿ ಎಲ್ಲಾ ಇಲಾಖೆಗಳು ಹಾಜರಿದ್ದರು ಗ್ರಾಮಸ್ಥರೇ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರುವುದರಿಂದ ಗ್ರಾಮ ಸಭೆಯು ಪರಿಪೂರ್ಣ ಆಗಲು ಸಾಧ್ಯವಿಲ್ಲ ಈ ದೃಷ್ಟಿಯಲ್ಲಿ ಮುಂದಿನ ಗ್ರಾಮ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಬರುವ ಹಾಗೆ ಗ್ರಾಮ ವ್ಯಾಪ್ತಿಯ ಪಂಚಾಯತ್ ಸದಸ್ಯರ ಜೊತೆಗೆ ವ್ಯಾಪ್ತಿಯ ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಸಾಮಾಜಿಕ ಅರಣ್ಯ ವಲಯ ಬಂಟ್ವಾಳದ ಉಪವಲಯ ಅರಣ್ಯ ಅಧಿಕಾರಿ ಕೃಷ್ಣಜೋಗಿ ಭಾಗವಹಿಸಿ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.
ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಗಳಾದ ಮೆಸ್ಕಾಂ, ಆರೋಗ್ಯ, ಕಂದಾಯ, ಮೈಲಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ, ಪಶು ಸಂಗೋಪನ ಇಲಾಖೆ, ಪೊಲೀಸ್ ಇಲಾಖೆ ಗಳಿಂದ ಇಲಾಖಾ ಮಾಹಿತಿ ನೀಡಲಾಯಿತು.
ಗ್ರಾಮಸ್ಥರು ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮೋಹಿನಿ, ಗ್ರಾಮ ಪಂಚಾಯತ್ ಸದಸ್ಯರುಗಳು, ವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾಮ ವ್ಯಾಪ್ತಿಯ ಆರೋಗ್ಯ ಸುರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಗ್ರಾಮಸ್ಥರು ಭಾಗವಹಿಸಿದ್ದರು. ನರಿಕೊಂಬು ಶಾಲಾ ಮಕ್ಕಳು ನಾಡಗೀತೆ ಹಾಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ ಎ ಸ್ವಾಗತಿಸಿ, ವಂದಿಸಿದರು.