ಬಂಟ್ವಾಳ: ಶಿಕ್ಷಣ ಇಲಾಖೆಯ ತೀರ್ಮಾನದಂತೆ ಗೋಳ್ತಮಜಲು ಸರಕಾರಿ ಹಿ.ಪ್ರಾ.ಶಾಲೆಯ ಶಿಥಿಲಾವಸ್ಥೆಯ ಕಟ್ಟಡ ತೆರವು(ಡೆಮಾಲಿಸ್) ಮಾಡಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಶೌರ್ಯ ವಿಪತ್ತು ತಂಡದ ಸದಸ್ಯರು ಓಂ ಶ್ರೀ ಸಾಯಿ ಗಣೇಶ್ ಸೇವಾ ಟ್ರಸ್ಟ್ ನ ಸಹಕಾರದೊಂದಿಗೆ ಶ್ರಮದಾನದ ಮೂಲಕ ಕಟ್ಟಡ ತೆರವು ಮಾಡಿದರು.

ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಉಪಯೋಗವಿಲ್ಲದಂತಿತ್ತು. ಆದರೆ ಕಟ್ಟಡ ತೆರವುಗೊಳ್ಳದೆ ಮುಂದೆ ಶಾಲೆ ಆರಂಭಗೊಂಡರೆ ಅಪಾಯದ ಆತಂಕವೂ ಎದುರಾಗಿತ್ತು. ಈ ಬಗ್ಗೆ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ವರದಿ ಯಾಗಿತ್ತು .ಹೀಗಾಗಿ ಕಳೆದ ಮೇ 16 ರಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಅವರು ಶಾಲಾಭಿವೃದ್ಧಿ ಸಮಿತಿ(ಎಸ್‌ಡಿಎಂಸಿ) ಹಾಗೂ ಮುಖ್ಯಶಿಕ್ಷಕರಿಗೆ ಶೀಘ್ರ ಕಟ್ಟಡ ತೆರವು ಮಾಡುವ ಕುರಿತು ನಿರ್ದೇಶನ ನೀಡಿದ್ದರು. ಜತೆಗೆ ಗೋಳ್ತಮಜಲು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿ ತೆರವು ಕಾರ್ಯಕ್ಕೆ ಸಹಕರಿಸಲು ವಿನಂತಿಸಿದ್ದರು.

ಆದರೆ ಶಾಲೆಯ ಕಟ್ಟಡ ತೆರವು ಎಸ್‌ಡಿಎಂಸಿ ಹಾಗೂ ಶಿಕ್ಷಕರಿಗೆ ದೊಡ್ಡ ತಲೆನೋವಾಗಿದ್ದು, ಹೇಗೆ ತೆರವು ಕಾರ್ಯ ನಡೆಸಬೇಕು ಎಂಬ ಆತಂಕ ಎದುರಾಗಿತ್ತು. ಹೀಗಾಗಿ ಅವರು ತೆರವು ಕಾರ್ಯ ನಡೆಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಶೌರ್ಯ ವಿಪತ್ತು ತಂಡಕ್ಕೆ ಮನವಿ ಮಾಡಿದ್ದರು. ಮನವಿ ಸ್ವೀಕರಿಸಿದ ಕಲ್ಲಡ್ಕ ಶೌರ್ಯ ತಂಡದ ಸದಸ್ಯರು ಓಂ ಶ್ರೀ ಸಾಯಿ ಗಣೇಶ್ ಸೇವಾ ಟ್ರಸ್ಟ್ ಗೋಳ್ತಮಜಲು ಇವರ ಸಹಕಾರದೊಂದಿಗೆ ತಂಡದ ಸುಮಾರು 15 ಮಂದಿ ಸದಸ್ಯರು ರವಿವಾರ ಶ್ರಮದಾನ ನಡೆಸಿದ್ದಾರೆ. ಪ್ರಾರಂಭದಲ್ಲಿ ಕಟ್ಟಡದ ಹಂಚುಗಳನ್ನು ತೆಗೆದು ಬಳಿಕ ಮೇಲ್ಛಾವಣಿಯ ಮರದ ಸೊತ್ತುಗಳನ್ನು ತೆರವು ಮಾಡಲಾಯಿತು. ಮುಂದೆ ಹಿಟಾಚಿ ಯಂತ್ರದ ಮೂಲಕ ಗೋಡೆಗಳನ್ನು ತೆರವು ಮಾಡುವ ಯೋಜನೆ ರೂಪಿಸಿದ್ದರು.

ಕಟ್ಟಡ ತೆರವು ಕಾರ್ಯಾಚರಣೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ಯೋಜನಾಧಿಕಾರಿ ರಮೇಶ್, ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಶೌರ್ಯ ವಿಪತ್ತು ತಂಡದ ಅಧ್ಯಕ್ಷ ಮಾಧವ ಸಾಲ್ಯಾನ್, ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ, ಶೌರ್ಯ ತಂಡದ ಸಂಯೋಜಕಿ ವಿದ್ಯಾ, ಗೋಳ್ತಮಜಲ್ ಒಕ್ಕೂಟ ಸೇವಾ ಪ್ರತಿನಿಧಿ ಗಿರಿಜಾ ,ಓಂ ಶ್ರೀ ಸಾಯಿ ಗಣೇಶ್ ಸೇವಾ ಟ್ರಸ್ಟ್ ನ ರಾಮಚಂದ್ರ, ಚಿದಾನಂದ, ಚೇತನ್,ಎಸ್‌ಡಿಎಂಸಿ ಅಧ್ಯಕ್ಷ ವೆಂಕಪ್ಪ, ಮುಖ್ಯಶಿಕ್ಷಕಿ ಸುಮಾ ಎಸ್.ಮೊದಲಾದವರು ಪಾಲ್ಗೊಂಡಿದ್ದರು.

ಶೌರ್ಯ ವಿಪತ್ತು ತಂಡದ ಕಾರ್ಯಕ್ಕೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ,ಗೋಳ್ತಮಜಲು ಶಾಲಾಭಿವೃದ್ಧಿ ಹಾಗೂ ಊರವರಿಂದ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.