ಬಂಟ್ವಾಳ: ದೇಶದ ಮಾನವ ಸಂಪನ್ಮೂಲ ಹಾಳಾಗಲು ಅಮಲು ಪದಾರ್ಥ ಸೇವನೆಯೊಂದೇ ಸಾಕು, ಬೇರಾವುದೇ ಕ್ಷಿಪಣಿ, ಬಾಂಬಿನ ಅಗತ್ಯವಿಲ್ಲ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ನ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಹೇಳಿದರು.
ಅವರು ಅ.6ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬಂಟ್ವಾಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬಂಟ್ವಾಳ ತಾಲೂಕು ಆಶ್ರಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮ ಸಹಯೋಗದೊಂದಿಗೆ ಬಂಟ್ವಾಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಗಾಂಧಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ರಾಜ್ಯದಲ್ಲಿ ೧೧ ಸಾವಿರ ಕ್ಕಿಂತಲೂ ಅಧಿಕ ಮದ್ಯದಂಗಡಿಗಳಿದೆ ಆದರೆ ಅಮಲು ಮುಕ್ತಗೊಳಿಸುವ ಡಿಎಡಿಕ್ಷನ್ ಸೆಂಟರ್ ಒಂದೂ ಇಲ್ಲ. ಈ ಬಗ್ಗೆ ಜನ ಸಮುದಾಯವನ್ನು ಜಾಗೃತಿಗೊಳಿಸುವ ಕಾರ್ಯ ಆಗಬೇಕಾಗಿದೆ ಎಂದರು.
ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಗಾಂಧೀಜಿ ಏನು ಅನ್ನುವುದನ್ನು ವಿಶ್ವ ಅರ್ಥ ಮಾಡಿಕೊಂಡಿದೆ. ಆದರೆ ನಾವು ಇಂದು ಅವರನ್ನು ಪ್ರಶ್ನೆ ಮಾಡುವ ಮಟ್ಟಕ್ಕೆ ಬೆಳೆದಿದ್ದೇವೆ. ಸ್ವಚ್ಚತೆಯ ಪರಿಕಲ್ಪನೆ ಸಾವಿರಾರು ವರ್ಷಗಳ ಹಿಂದೆ ತುಳುವರಲಿತ್ತು. ಆದರೆ ಇಂದು ನಾವು ಮರೆತ್ತಿದ್ದೇವೆ ಎಂದ ಅವರು ಮಹಾತ್ಮ ಗಾಂಧಿ ಹಾಗೂ ಡಾ. ವೀರೇಂದ್ರ ಹೆಗ್ಗಡೆಯವರ ಯೋಜನೆ, ಸಿದ್ದಾಂತವನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು ಎಂದರು.
ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಎ.ಸಿ. ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿದರು. ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು. ಅಧ್ಯಕ್ಷ ರೋನಾಲ್ಡ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು.
ಸಭಾ ಕಾರ್ಯಕ್ರಮದ ಮೊದಲು ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಮಹಾತ್ಮ ಗಾಂಧೀಜಿಯವರ ಭಾವಚಿತ್ರದೊಂದಿಗೆ ದುಶ್ಚಟದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಲಾಯಿತು.
ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷ ಚಿದಾನಂದ ರೈ ಕಕ್ಯ, ಶೌರ್ಯ ವಿಪತ್ತು ತಂಡದ ಕ್ಯಾಪ್ಟನ್ ಪ್ರಕಾಶ್, ಎಸ್ಕೆಡಿಆರ್ಡಿಪಿ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ವಲಯಧ್ಯಕ್ಷರಾದ ಮನ್ಮಥ ರಾಜ್ ಜೈನ್, ಪುರುಷೋತ್ತಮ ಸರಪಾಡಿ, ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಉಪಸ್ಥಿತರಿದ್ದರು.
ಶ್ರೀಕ್ಷೇತ್ರ ಧರ್ಮಸ್ಣಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಸಂದೇಶವನ್ನು ಎಲ್ ಇಡಿ ಪರದೆಯ ಮೂಲಕ ಪ್ರಸಾರ ಮಾಡಲಾಯಿತು. ಇಬ್ಬರು ನವಜೀವನ ಸಮಿತಿ ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದರು. ನವಜೀವನ ಸಮಿತಿ ಸದಸ್ಯರನ್ನು ಶಾಲು ಹಾಕಿ ಗೌರವಿಸಲಾಯಿತು.
ವಗ್ಗ ಸೇವಾಪ್ರತಿನಿಧಿ ರೇಖಾ ಪ್ರಾರ್ಥಿಸಿ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಪ್ರಾಸ್ತಾವಿಕ ದೊಂದಿಗೆ ಸ್ವಾಗತಿಸಿದರು. ಪಾಣೆಮಂಗಳೂರು ವಲಯದ ಮೇಲ್ವಿಚಾರಕಿ ಅಮಿತಾ ಕಾರ್ಯಕ್ರಮ ನಿರೂಪಿಸಿದರು. ವಗ್ಗ ವಲಯದ ಮೇಲ್ವಿಚಾರಕಿ ಸವಿತಾ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.