ಬಂಟ್ವಾಳ, ಜು. 16: ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರ ಜೊತೆಗೆ ಗ್ರಾಮಸ್ಥರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಗ್ರಾಮ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸನ ಕಾರ್ಯಕ್ರಮಗಳು, ಮಾಸಾಸನ, ಸಹಾಯಧನ, ವಾಸ್ತಲ್ಯ ಕಾರ್ಯಕ್ರಮ, ಸಂಪೂರ್ಣ ಸುರಕ್ಷಾ, ಜನಮಂಗಳ, ಕೃಷಿ ಅನುದಾನ, ಕ್ರಿಟಿಕಲ್ ಸಹಾಯಧನ ಮುಂತಾದ ಕಾರ್ಯಕ್ರಮಗಳನ್ನು ಯೋಜನೆಯ ಕಾರ್ಯಕ್ರಮವಾಗಿ ಮಾಡುತ್ತಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹೇಳಿದರು.

ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಮಾತನಾಡಿದರು

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್( ರಿ.) ಬಂಟ್ವಾಳ ಇದರ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಯೋಜನೆಯ ಪಾಣೆ ಮಂಗಳೂರು ವಲಯದ ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಸಜೀಪಮೂಡ, ಗ್ರಾಮ ಪಂಚಾಯತ್ ಸಜೀಪಮೂಡ, ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಮಿತಿ ಸಜೀಪಮೂಡ, ಎ. ಜೆ. ಆಸ್ಪತ್ರೆ ಮಂಗಳೂರು ಹಾಗೂ ಸಮುದಾಯ ವಿಭಾಗ ಪಾಣೆ ಮಂಗಳೂರು ಇದರ ಸಹಯೋಗದೊಂದಿಗೆ ಶ್ರೀ ಗುರು ನಾರಾಯಣ ಸಭಾಭವನ ಸಜೀಪಮೂಡ ಇಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಸಜೀಪಮೂಡ ಇಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಸಜೀಪ ಮೂಡ ಅಧ್ಯಕ್ಷರಾದ ಹರಿಣಾಕ್ಷಿ ವಹಿಸಿದ್ದರು, ಉದ್ಘಾಟನೆಯನ್ನು ಬ್ರಹ್ಮಶ್ರೀ ನಾಯಕರು ಸೇವಾ ಸಮಿತಿ ಸಜೀಪ ಮೂಡದ ಅಧ್ಯಕ್ಷರಾದ ರಮೇಶ್ ಮಾಡಿದರು.

ವೇದಿಕೆಯಲ್ಲಿ ಸಜೀಪ ಮೂಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೋಭಾ ಶೆಟ್ಟಿ, ಮಾಜಿ ಅಧ್ಯಕ್ಷರಾದ ಶೋಬಿತ್ ಪೂಜಾ, ಎ ಜೆ ಆಸ್ಪತ್ರೆ ಮಂಗಳೂರಿನ ಸಮುದಾಯ ವೈದ್ಯಕೀಯ ವಿಭಾಗದ ಡಾಕ್ಟರ್ ವಾಮನ್ ನಾಯಕ್, ದಂತ ವೈದ್ಯೆ ಡಾಕ್ಟರ್ ಸಿತಾರಾ, ಬ್ರಹ್ಮಶ್ರೀ ನಾರಾಯಣಗುಡು ಸೇವಾ ಸಮಿತಿಯ ಕಾರ್ಯದರ್ಶಿ ಅಶ್ವಿನ್ ಪೂಜಾರಿ ಕಾರಜೆ ಮೊದಲಾದವರು ಉಪಸ್ಥಿತರಿದ್ದರು.

ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ

ಜ್ಞಾನ ವಿಕಾಸ ಸದಸ್ಯೆ ಶೋಭಿತ ಪ್ರಾರ್ಥಿಸಿ, ಜ್ಞಾನ ವಿಕಾಸ ಸಮ್ಮನ್ವಾಧಿಕಾರಿ ಶೃತಿ ಸ್ವಾಗತಿಸಿ, ಪಾಣೆ ಮಂಗಳೂರು ವಲಯ ಮೇಲ್ವಿಚಾರಕಿ ಅಮಿತಾ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಸಾಮಾನ್ಯ ರೋಗ ತಪಾಸಣೆ ,ಚರ್ಮರೋಗ ತಪಾಸಣೆ , ಸ್ತ್ರೀರೋಗ ತಪಾಸಣೆ, ಇ.ಸಿ.ಜಿ. ಚಿಕಿತ್ಸೆ ಮೊದಲಾದವುಗಳನ್ನು ಮಾಡಲಾಯಿತು.