ಎರಡನೇ ಬಾರಿಗೆ ತುಂಗಭದ್ರಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಇಂದು ಜಲಾಶಯಕ್ಕೆ ಸಿ.ಎಂ.ಸಿದ್ಧರಾಮಯ್ಯ ಅವರು ಬಾಗಿನ ಅರ್ಪಿಸಿದರು. ಬಳಿಕ ಕೊಚ್ಚಿ ಹೋಗಿದ್ದ ಕ್ರೆಸ್ಟ್ ಗೇಟನ್ನು ಅತ್ಯಂತ ತುರ್ತಾಗಿ ಅಳವಡಿಸಿದ ಎಂಜಿನಿಯರ್ ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಿದರು.
ಬಳಿಕ ಮಾತನಾಡಿ ಒಂದೇ ವಾರದಲ್ಲಿ ತುಂಗಭದ್ರಾ ಜಲಾಶಯಕ್ಕೆ ಗೇಟ್ ಅಳವಡಿಸಿ 20 ಟಿಎಂಸಿ ನೀರು ಉಳಿಸಿದ ತಜ್ಞರಿಗೆ ರೈತರ ಪರವಾಗಿ ಧನ್ಯವಾದ ಅರ್ಪಿಸಿದರು. ರೈತರಿಗೆ ಎರಡನೇ ಬೆಳೆಗೂ ನೀರು ಸಿಗತ್ತದೆ, ಈ ಭಾಗದ ರೈತರು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಗೇಟ್ ಮುರಿದಾಗ ನಮ್ಮ ರೈತರು ಆತಂಕದಲ್ಲಿದ್ದರು. ಜಲ ಸಂಪನ್ಮೂಲ ಸಚಿವರು ಮತ್ತು ನಾನು ಚರ್ಚಿಸಿ ತುರ್ತಿನ ಕ್ರಮಕ್ಕೆ ಮುಂದಾದೆವು. ನಮ್ಮ ಸೂಚನೆಯಂತೆ ಒಂದೇ ವಾರದಲ್ಲಿ ಗೇಟ್ ಅಳವಡಿಸಿ 20 ಟಿಎಂಸಿ ನೀರನ್ನು ಉಳಿಸಿದ ತಜ್ಞ ಕನ್ನಯ್ಯ ನಾಯ್ಡು ಮತ್ತು ಎಂಜಿನಿಯರ್ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ.
ಎಡ ಮತ್ತು ಬಲ ದಂಡೆ ಕಾಲುವೆ ಸೇರಿ ರಾಜ್ಯದ 9,26,438 ಎಕರೆ ಕೃಷಿಭೂಮಿಗೆ, ಆಂದ್ರಪ್ರದೇಶದ 6,25,097 ಎಕರೆ, ತೆಲಂಗಾಣದ 87,000 ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ತುಂಗಭದ್ರಾ ಅಣೆಕಟ್ಟು ಎರಡನೇ ಬಾರಿ ತುಂಬಿರುವುದ ಅತ್ಯಂತ ಸಂತಸದ ವಿಚಾರ.
ಅಣೆಕಟ್ಟೆಯ 19ನೇ ಕ್ರೆಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿ ಅಪಾರ ಪ್ರಮಾಣದ ನೀರು ಹರಿದು ಹೋಗಿದ್ದನ್ನು ಪರಿಶೀಲಿಸಲು ಆಗಸ್ಟ್ 13 ರಂದು ಇಲ್ಲಿಗೆ ಆಗಮಿಸಿದ್ದೆ. ತುಂಗಭದ್ರಾ ಅಣೆಕಟ್ಟು ಮತ್ತೆ ಮೈ ತುಂಬಿಕೊಳ್ಳುತ್ತದೆ. ಆಗ ನಾನೇ ಬಂದು ಬಾಗಿನ ಅರ್ಪಿಸುತ್ತೇನೆ ಎಂದು ಆಗ ಹೇಳಿದ್ದೆ. ಕೊಟ್ಟ ಮಾತಿನಂತೆ ಇಂದು ಬಾಗಿನ ಅರ್ಪಿಸಿದ್ದೇನೆ.
ಕಲ್ಯಾಣ ಕರ್ನಾಟಕದ ಎಲ್ಲಾ ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ ಗೆ ಕೊಟ್ಟಿದ್ದೀರಿ. ನಾವು ಕಲ್ಯಾಣ ಕರ್ನಾಟಕದಲ್ಲಿ ವಿಶೇಷ ಕ್ಯಾಬಿನೆಟ್ ನಡೆಸಿ 46 ವಿಷಯಗಳನ್ನು, ಅನೇಕ ಕಾರ್ಯಕ್ರಮಗಳನ್ನು ಕಲ್ಯಾಣ ಕರ್ನಾಟಕದ ಅಭಿವಧ್ಧಿಗಾಗಿ ಘೋಷಿಸಿದ್ದೇವೆ.
ಕಲ್ಯಾಣ ಕರ್ನಾಟಕಕ್ಕೆ 371ಜೆ ಜಾರಿ ಮಾಡಲು ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರ ವಿರೋಧಿಸಿತ್ತು. ಆದರೆ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ 371 ಜೆ ಜಾರಿ ಮಾಡಿದರು.
ಪ್ರಾದೇಶಿಕ ಅಸಮಾನತೆ ಅಧ್ಯಯನಕ್ಕೆ ಗೋವಿಂದರಾವ್ ಅವರ ಸಮಿತಿ ರಚಿಸಿದ್ದೇವೆ. ಸಮಿತಿ ವರದಿ ನೀಡುತ್ತಿದ್ದಂತೆ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಹೊಸ ನೀಲನಕ್ಷೆ ರಚಿಸುತ್ತೇವೆ. ಈಗಾಗಲೇ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ₹5,000 ಕೋಟಿ ಘೋಷಿಸಿ ಆಗಿದೆ. ಕೇಂದ್ರ ಸರ್ಕಾರ ಕೂಡ ₹5,000 ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದೇವೆ ಎಂದರು.