ವಿದ್ಯೆ ಎಂದರೆ ಕೇವಲ ಪದವಿ ಅಥವಾ ಉದ್ಯೋಗಕ್ಕೆ ಸೀಮಿತವಲ್ಲ; ಅದು ಮಾನವನ ಜೀವನವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವ ಶಕ್ತಿಯಾಗಿದೆ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ ಅವರು ಅಭಿಪ್ರಾಯಪಟ್ಟರು.
ಅವರು ಫೆಬ್ರವರಿ 1ರ ಆದಿತ್ಯವಾರ ಪೆರ್ಲಾಪು ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ.), ಕಡೇಶಿವಾಲಯ ಇದರ 9ನೇ ವರ್ಷದ ವಾರ್ಷಿಕ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯೆ ಮನುಷ್ಯನ ಚಿಂತನೆ, ವ್ಯಕ್ತಿತ್ವ ಮತ್ತು ಮೌಲ್ಯಗಳನ್ನು ರೂಪಿಸುವ ಅತ್ಯಂತ ಪ್ರಮುಖ ಸಾಧನವಾಗಿದೆ. ವಿದ್ಯಾವಂತ ಯುವಕರು ಮಾತ್ರ ಸಮಾಜದ ಜವಾಬ್ದಾರಿಗಳನ್ನು ಅರಿತು, ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾತ್ರವಹಿಸಲು ಸಾಧ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಕುಣಿತ ಭಜನೆ ನಡೆಯಿತು. ಬಳಿಕ ಗುರುಪೂಜೆ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರಾದ ಮೋಹನ್ ಕುಮಾರ್ ನೆತ್ತರ ಕಡೇಶಿವಾಲಯ ವಹಿಸಿದ್ದರು. ಪುತ್ತೂರು ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಪ್ರಶಾಂತ್ ಅನಂತಾಡಿ ದಿಕ್ಸೂಚಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿಲ್ಲವ ಬ್ರಿಗೇಡ್ ಸಂಸ್ಥಾಪಕ ಸದಾನಂದ ಪೂಜಾರಿ, ಉದ್ಯಮಿ ಅಶೋಕ್ ಶಾಂತಿಗುಡ್ಡೆ, ಶಿಕ್ಷಕಿ ಗೀತಾ ಕುಮಾರಿ, ಹಾಗೂ ಯುವ ಪ್ರತಿಭೆ ದಿಶಾ ಕೆ. ಪೂಜಾರಿ ಬರಿಮಾರು ಇವರಿಗೆ ಗೌರವ ಅಭಿನಂದನಾ ಕಾರ್ಯಕ್ರಮ ಜರಗಿತು.
ಗೌರವ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಗೀತಾ ಕುಮಾರಿ ಬಿರುವಿರು ಕಡೇಶಿವಾಲಯ ಸೇವಾ ಟ್ರಸ್ಟ್ ಸೂಚಿಸುವ ನಾಲ್ಕು ವಿದ್ಯಾರ್ಥಿಗಳಿಗೆ ಪ್ರತಿವರ್ಷವು ತಲಾ 5 ಸಾವಿರದಂತೆ ನೀಡುವುದಾಗಿ ತಿಳಿಸಿ ಸದರಿ ವರ್ಷದ 20 ಸಾವಿರವನ್ನು ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಗಳನ್ನು ವಿತರಿಸಲಾಯಿತು.
ನಂತರ ವಿದ್ಯಾಧರ ಪೂಜಾರಿ ಅವರ ನೇತೃತ್ವದ ನೂತನ ಸಮಿತಿಗೆ ಪದಗ್ರಹಣ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ.) ಅಧ್ಯಕ್ಷರಾದ ಯಶವಂತ್ ಸಾಲಿಯನ್ ಪತ್ತುಕೊಡಂಗೆ, ಗೌರವಾಧ್ಯಕ್ಷ ಮೋಹನ್ ಕುಮಾರ್ ಕಲ್ಲಾಜೆ, ಕಾರ್ಯದರ್ಶಿ ಸಂದೇಶ್ ಕುಂಡಾಜೆ ಮೊದಲಾದವರು ಉಪಸ್ಥಿತರಿದ್ದರು.
ಸೃಷ್ಟಿ, ಶ್ರೀಯ, ಸಿಂಧು, ವೈಷ್ಣವಿ ಮತ್ತು ವೈಭವಿ ಪ್ರಾರ್ಥನೆ ಸಲ್ಲಿಸಿದರು. ನೂತನ ಅಧ್ಯಕ್ಷ ವಿದ್ಯಾಧರ ಪೂಜಾರಿ ಪ್ರಾಸ್ತಾವಿಕ ವರದಿಯೊಂದಿಗೆ ಸ್ವಾಗತಿಸಿದರು. ಸ್ವಾತಿ ದಿವಾಕರ್, ಕಾವ್ಯಶ್ರೀ, ಕೀರ್ತಿ ಕಲ್ಲಾಜೆ ಮತ್ತು ಸಂಧ್ಯಾ ವಿದ್ಯಾಧರ ಪೂಜಾರಿ ಸನ್ಮಾನ ಪತ್ರಗಳನ್ನು ವಾಚಿಸಿದರು. ದಿನೇಶ್ ಅಂಚನ್ ಸುರ್ಲಾಜೆ ವಂದಿಸಿದರು. ಕಾರ್ಯಕ್ರಮವನ್ನು ರೇಣುಕಾ ಕಾಣಿಯೂರು ನಿರೂಪಿಸಿದರು.
