ಬಂಟ್ವಾಳ: ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಹಾಗೂ ಕ್ರೀಡಾ ಭಾರತಿ ದ.ಕ.ಜಿಲ್ಲೆಯ ಸಹಭಾಗಿತ್ವದಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಎನ್‌ಎಂಪಿಎಯ ಸಿಎಸ್‌ಆರ್ ನಿಧಿಯಿಂದ ದ.ಕ.ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಕಬಡ್ಡಿ ಮ್ಯಾಟ್‌ಗಳ ವಿತರಣಾ ಸಮಾರಂಭ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮ್ಯಾಟ್ ವಿತರಿಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ ಮಾತನಾಡಿ, ದೇಶದ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಧಾನಿ ಮೋದಿಯವರು ಹೆಚ್ಚಿನ ಒತ್ತು ನೀಡುತ್ತಿದ್ದು, ಕಬಡ್ಡಿಯನ್ನು 2036ರ ಒಲಿಂಪಿಕ್ಸ್ ನಲ್ಲಿ ಸೇರಿಸುವ ಪ್ರಯತ್ನವೂ ನಡೆಯುತ್ತಿದೆ. ಸ್ಮಾರ್ಟ್ ಸಿಟಿಯ ಮೂಲಕ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಈಜುಕೊಳ ನಿರ್ಮಾಣವಾಗಿದ್ದು, ಮುಂದೆ ತಾಲೂಕುಗಳಲ್ಲಿ ಖೇಲೋ ಇಂಡಿಯಾ ಮೂಲಕ ಕ್ರೀಡಾ ಸಂಕೀರ್ಣ ನಿರ್ಮಾಣವಾಗಲಿದೆ. ದೇಶದಲ್ಲಿ ಕ್ರೀಡಾ ಕ್ಷೇತ್ರಕ್ಕೆ ನೀಡುವ ಅನುದಾನವೂ ಮೂರು ಪಟ್ಟು ಹೆಚ್ಚಳಗೊಂಡಿದೆ ಎಂದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಿನ ದಿನಗಳಲ್ಲಿ ಕ್ರೀಡೆಯಿಂದ ಜೀವನ ಕಟ್ಟಿಕೊಳ್ಳುವುದಕ್ಕೂ ಸಾಧ್ಯವಿದ್ದು, ವ್ಯಕ್ತಿಯು ದುಶ್ಚಟಗಳಿಂದ ದೂರ ಇರಲು ಕ್ರೀಡೆ ಸಹಕಾರಿಯಾಗಿದೆ ಎಂದರು. ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಜಿಲ್ಲೆಯ ವಿವಿಧ ಕಂಪೆನಿಗಳು ಕ್ರೀಡಾಪಟುಗಳಿಗೆ ಉದ್ಯೋಗ ನೀಡುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಸಮಾರಂಭದಲ್ಲಿ ಎನ್‌ಎಂಪಿಎ ಅಧ್ಯಕ್ಷ ಡಾ| ವೆಂಕಟರಮಣ ಅಕ್ಕರಾಜ್, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರಾಜೇಶ್ ಮಲ್ಲಿ, ಯುವಜನ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರದೀಪ್ ಡಿಸೋಜ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯಸ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್, ರಾಷ್ಟ್ರೀಯ ಕಬಡ್ಡಿ ಆಟಗಾರರಾದ ಪ್ರಶಾಂತ್ ರೈ ಕೈಕಾರ, ಗೋಪಿನಾಥ್ ಕಾಪಿಕಾಡ್, ಪ್ರಮುಖರಾದ ಚಂದ್ರಹಾಸ ಶೆಟ್ಟಿ ಪುತ್ತೂರು, ಭೋಜರಾಜ್ ಕಲ್ಲಡ್ಕ, ರವೀಂದ್ರ ಶೆಟ್ಟಿ ಉಳಿದೊಟ್ಟು, ಕಾರ್ಯಪ್ಪ ರೈ, ರತನ್ ಶೆಟ್ಟಿ, ಪುಷ್ಪರಾಜ್ ಚೌಟ, ಬೇಬಿ ಕುಂದರ್, ರೋಹಿತ್ ಸುವರ್ಣ, ಚಂದ್ರಶೇಖರ್ ಕರ್ಣ, ಡಾ| ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.
ಕ್ರೀಡಾ ಭಾರತಿ ರಾಜ್ಯ ಉಪಾಧ್ಯಕ್ಷ ಬಿ.ನಾಗರಾಜ ಶೆಟ್ಟಿ ಸ್ವಾಗತಿಸಿದರು. ಅಸೋಸಿಯೇಶನ್ ಗೌರವ ಸಲಹೆಗಾರ ಪುರುಷೋತ್ತಮ ಪೂಜಾರಿ ವಂದಿಸಿದರು. ಕ್ರೀಡಾ ಭಾರತಿ ಕಾರ್ಯದರ್ಶಿ ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.