ಬಂಟ್ವಾಳ : ಪಾಣೆಮಂಗಳೂರು ಜ್ಯೋತಿ ಬೀಡಿ ಸಂಸ್ಥೆಯ ಮಾಲಕ, ನರಿಕೊಂಬು ಗ್ರಾಮದ ಮೊಗರ್ನಾಡ್ ನಿವಾಸಿ, ಪ್ರಗತಿಪರ ಕೃಷಿಕ, ಬಂಟ್ವಾಳ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ (77)ಸೆ.27 ರಂದು ಸ್ವಗ್ರಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ಲಕ್ಷ್ಮೀ, ಪುತ್ರ ಭುವನೇಶ್ವರ, ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಸಹೋದರ ಬಂಟ್ವಾಳ ಪುರಸಭೆಯ ಮಾಜಿ ಸದಸ್ಯ ಕೃಷ್ಣಪ್ಪ ಬಂಗೇರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಅವರು ಆರಂಭದಲ್ಲಿ ಟೈಲರ್ ವೃತ್ತಿದಾರರಾಗಿದ್ದರು, ಆರ್ ಎಸ್ ಎಸ್ ಹಿರಿಯ ಕಾರ್ಯಕರ್ತರಾಗಿ ತರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ್ದರು.
ಪಾಣೆಮಂಗಳೂರು ಸುಮಂಗಲ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನರಿಕೊಂಬು ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಹಾಲಿ ಗೌರವಾಧ್ಯಕ್ಷರಾಗಿದ್ದರು. ಪಾಣೆಮಂಗಳೂರು ಶ್ರೀ ಭಯಂಕೇಶ್ವರಿ ದೇವಸ್ಥಾನ, ನರಿಕೊಂಬು ನಾಲ್ಕೈತ್ತಾಯ ದೈವಸ್ಥಾನ, ಕೇದಿಗೆ ವೀರಭದ್ರ ದೇವಸ್ಥಾನ, ಪಾಣೆಮಂಗಳೂರು ಸತ್ಯದೇವತಾ ಗುಡಿ, ಮೆಲ್ಕಾರ್ ನಾಗಸನ್ನಿಧಿ, ಬಜಗೋಳಿ ಧರ್ಮದೇವಿ ದೇವಸ್ಥಾನ, ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಶ್ರೀ ಧರ್ಮರಸು, ಕ್ಷೇತ್ರ, ವಗ್ಗ ಕಾಡಬೆಟ್ಟು ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯದಲ್ಲಿ ವಿಶೇಷ ಕೊಡುಗೆ ಸಲ್ಲಿಸಿದ್ದರು.
ಬಂಟ್ವಾಳ ಪುರಸಭೆ ಪ್ರಥಮ ಸದಸ್ಯರಾಗಿ ರಾಜಕೀಯ ಸೇವೆ ನೀಡಿದ್ದರು.
ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಂಘಟನೆಯಲ್ಲಿ ತೊಡಗಿಸಿಕೊಂಡು ನೂರಾರು ಮಂದಿಗೆ, ಉದ್ಯೋಗದಾತರಾಗಿ ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದರು.
ರಾ.ಸ್ವ.ಸಂಘದ ಡಾ. ಪ್ರಭಾಕರ ಭಟ್, ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವರಾದ ಬಿ.ರಮಾನಾಥ ರೈ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ ಸಹಿತ ಅನೇಕರು ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.