ಬೆಂಗಳೂರು/ಮೈಸೂರು: ಕಾನೂನು ಬಾಹಿರವಾಗಿ ವಿದೇಶಿ ಬಾತುಕೋಳಿಗಳನ್ನು ಸಾಕಿದ್ದಕ್ಕೆ ನಟ ದರ್ಶನ್‌ ಮತ್ತು ವಿಜಯಲಕ್ಷ್ಮಿ  ವಿರುದ್ಧ ದೂರು ದಾಖಲಾಗಿದ್ದು ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ.

ನಿಷೇಧಿತ ಬಾತುಕೋಳಿಗಳನ್ನ ಕೂಡಿಹಾಕಿದ ಆರೋಪದ ಆಡಿ ಅರಣ್ಯ ಇಲಾಖೆ  ಅಧಿಕಾರಿಗಳು ದರ್ಶನ್, ವಿಜಯಲಕ್ಷ್ಮಿ, ನಾಗರಾಜ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿ ಟಿ.ನರಸೀಪುರದ ಸಿವಿಲ್ ನ್ಯಾಯಾಲಯಕ್ಕೆ ಖಾಸಗಿ ದೂರನ್ನು ನೀಡಿದ್ದರು.

ಟಿ.ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿಯ ವಿಜಯಲಕ್ಷ್ಮೀ ಮಾಲೀಕತ್ವದ ಜಾಗದಲ್ಲಿರುವ ತೂಗುದೀಪ ಫಾರಂ ಹೌಸ್‌ನಲ್ಲಿ ಅಕ್ರಮವಾಗಿ ವಿದೇಶಿ ಬಾತುಕೋಳಿಗಳನ್ನು ಸಾಕಲಾಗುತ್ತದೆ ಎಂಬ ಆರೋಪ ಕೇಳಿಬಂದಿದೆ.

ದರ್ಶನ್‌ ಅವರು ಯೂಟ್ಯೂಬ್‌ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಫಾರಂ ಹೌಸ್‌ನಲ್ಲಿರುವ ಪ್ರಾಣಿ, ಪಕ್ಷಿಗಳ ಬಗ್ಗೆ ವಿವರಿಸಿದ್ದರು. ಮಂಗೋಲಿಯಾ, ರಷ್ಯಾ, ಚೀನಾದಲ್ಲಿ ಕಾಣಿಸಿಕೊಳ್ಳುವ Bar-headed goose ಬಾತುಕೋಳಿಯ ಬಗ್ಗೆ ದರ್ಶನ್‌ ಮಾತನಾಡಿದ್ದರು.

ಸಂದರ್ಶನ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಇದು ಚರ್ಚೆಗೆ ಕಾರಣವಾಗಿತ್ತು. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಫಾರಂ ಹೌಸ್‌ ಮೇಲೆ ದಾಳಿ ನಡೆಸಿದ್ದರು. ಪ್ರಾಥಮಿಕ ತನಿಖೆ ನಡೆಸಿದ ಬಳಿಕ ವರದಿ ಸಮೇತ ಖಾಸಗಿ ದೂರು ನೀಡಿದ್ದರು.

ಅರಣ್ಯ ಇಲಾಖೆ ಅಧಿಕಾರಿಗಳ ತನಿಖೆಯಲ್ಲಿ ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವ ಕಾರಣ ಕೋರ್ಟ್‌ ಸಮನ್ಸ್‌ ಜಾರಿ ಮಾಡಿ ಜುಲೈ 4 ರಂದು ದರ್ಶನ್‌, ವಿಜಯಲಕ್ಷ್ಮಿ ಮತ್ತು ನಾಗರಾಜ್‌ಗೆ ಖದ್ದು ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ.

ದಾಳಿ ವೇಳೆ ಬಾರ್‌ ಹೆಡೆಡ್‌ ಗೂಸ್‌ ಹೆಚ್ಚಾಗಿ ಮಧ್ಯ ಏಷ್ಯಾ ಪ್ರದೇಶದ್ದಾಗಿದ್ದು ವಲಸೆ ಬಂದಿದ್ದವು. ಇವುಗಳನ್ನು ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧವಾಗಿದೆ. ಅರಣ್ಯ ಅಧಿಕಾರಿಗಳು ಪ್ರಶ್ನಿಸಿದಾಗ ಈ ಬಾತುಕೋಳಿಗಳನ್ನು ಸ್ನೇಹಿತರು ನೀಡಿದ್ದರು ಎಂಬ ಉತ್ತರ ದರ್ಶನ್‌ ಕಡೆಯಿಂದ ಬಂದಿತ್ತು.