ಜಾತಿ-ಧರ್ಮದ ಸಹಿಷ್ಣತೆ ಇರುವ, ಸರ್ವರನ್ನೂ ಒಳಗೊಳ್ಳುವ ಪರಂಪರೆ ನಮ್ಮದು. ಮನುಷ್ಯರನ್ನು ಜಾತಿ-ಧರ್ಮದ ನೆಪದಲ್ಲಿ ವಿರೋಧಿಸುವ ಕೆಲವರು ಪ್ರಾಣಿಗಳನ್ನು ಪ್ರೀತಿಸುತ್ತಾರೆ. ಪ್ರಾಣಿಗಳನ್ನು ಪ್ರೀತಿಸುವುದು ತಪ್ಪಲ್ಲ, ಆದರೆ ಮನುಷ್ಯರನ್ನು ವಿರೋಧಿಸುವುದು ತಪ್ಪು ಎಂದು ಸಿ.ಎಂ.ಸಿದ್ಧರಾಮಯ್ಯ ಹೇಳಿದರು.
ಅವರು ಮೈಸೂರು ಜಿಲ್ಲಾಡಳಿತ ಇಂದು ಹೆಚ್.ಡಿ ಕೋಟೆಯಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಮತ್ತು ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಆರ್ಥಿಕವಾಗಿ ಸರ್ವರಿಗೂ ಶಕ್ತಿ ಬಂದರೆ ಜಾತಿ ಹೋಗುತ್ತದೆ. ಬುದ್ಧ, ಬಸವಣ್ಣ ಅವರು ಜಾತಿ ಹೋಗಬೇಕೆಂದು ಹೋರಾಟ ಮಾಡಿದರೂ ಇನ್ನೂ ಜಾತಿ ಹೋಗಿಲ್ಲ. ಬಸವಣ್ಣನನ್ನು ಪ್ರೀತಿಸ್ತೀವಿ, ಪೂಜಿಸ್ತೀವಿ ಆದರೆ ಬಸವಣ್ಣರನ್ನು ಪಾಲಿಸುವುದಿಲ್ಲ. ಇದು ಇಂದಿನ ದುರಂತ.
ಜಾತಿ ಅಸಮಾನತೆ ಕಾರಣಕ್ಕೆ ನೊಂದಿದ್ದ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಸೇರಿ, ತಾನು ಹಿಂದೂವಾಗಿ ಹುಟ್ಟಿದರೂ ಹಿಂದೂವಾಗಿ ಸಾಯುವುದಿಲ್ಲ ಎಂದು ಘೋಷಿದಿದ್ದರು.
ಒಳಮೀಸಲಾತಿ ಕುರಿತಾದ ಗೊಂದಲ ನಿವಾರಿಸಲು ನಾಗಮೋಹನ್ ದಾಸ್ ಅವರ ಸಮಿತಿ ರಚಿಸಿದ್ದೇವೆ. ಸಮಿತಿಯ ಶಿಫಾರಸ್ಸಿನಂತೆ ದತ್ತಾಂಶ ಸಂಗ್ರಹಕ್ಕೆ ಸಮೀಕ್ಷೆ ಆರಂಭಿಸಿದ್ದೇವೆ. ಮೂರು ಹಂತಗಳಲ್ಲಿ ಸಮೀಕ್ಷೆ ನಡೆಯಲಿದೆ. ಈ ಸಮೀಕ್ಷೆ ಒಳ ಮೀಸಲಾತಿಯ ಎಲ್ಲಾ ಗೊಂದಲಗಳನ್ನು ನಿವಾರಿಸುತ್ತದೆ ಎನ್ನುವ ಭರವಸೆ ಇದೆ ಎಂದರು.
ಅಂಬೇಡ್ಕರ್ ಅವರು ಮೀಸಲಾತಿ ಕೊಡದೇ ಹೋಗಿದ್ದರೆ ನಾವು ಮನುಷ್ಯರಾಗಲು ಸಾಧ್ಯವೇ ಇರಲಿಲ್ಲ. ನಾನು ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ . ಶತ ಶತಮಾನಗಳ ಕಾಲ ಶೂದ್ರ ಸಮುದಾಯವನ್ನು ಶಿಕ್ಷಣದಿಂದ ದೂರ ಇಡಲಾಗಿತ್ತು. ಸಂವಿಧಾನದ ಕಾರಣದಿಂದ ಶಿಕ್ಷಣ ಪಡೆದು ಮುಖ್ಯಮಂತ್ರಿ ಆದೆ, ಇಲ್ಲದಿದ್ದರೆ ಕುರಿನೊ, ಎಮ್ಮೆನೊ ಕಾಯ್ಕಂಡು ಇರಬೇಕಿತ್ತು.
ಇಂದು ಒಂದೇ ದಿನ 140 ಕೋಟಿ ಅಭಿವೃದ್ಧಿ ಕಾರ್ಯಗಳನ್ನು ಹೆಚ್.ಡಿ.ಕೋಟೆ ಜನಕ್ಕೆ ಅರ್ಪಿಸಿದ್ದೇವೆ. ಈ ಬಾರಿ ₹8,000 ಕೋಟಿ ಶಾಸಕರ ಅನುದಾನ, ಸಾವಿರಾರು ಕೋಟಿ ಹಣ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟಿದ್ದೇವೆ. 55 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗೆ ತೆಗೆದಿರಿಸಿದ್ದೀವಿ. 80 ಸಾವಿರ ಕೋಟಿ ಬಂಡವಾಳ ವೆಚ್ಚಕ್ಕೆ ಮೀಸಲಿರಿಸಿಟ್ಟೇವೆ. ಈ ಹಣ ಎಲ್ಲಿಂದ ಬಂತು?
ಬಿಜೆಪಿಯವರು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳ್ತಾರೆ. ಹಾಲಿನ ದರ 4ರೂ ಹೆಚ್ಚು ಮಾಡಿ ಇದರಲ್ಲಿ ಒಂದೂ ರೂಪಾಯಿಯನ್ನೂ ನಾವು ಇಟ್ಟುಕೊಳ್ಳದೆ ಅಷ್ಟನ್ನೂ ರೈತರಿಗೆ, ಗೋಸಾಕಾಣಿಕೆದಾರರಿಗೆ ವರ್ಗಾಯಿಸಿದ್ದೇವೆ ಎಂದರು.