ಕೆಂಪೇಗೌಡರ ಜಯಂತಿ ಅಂಗವಾಗಿ ಇಂದು ವಿಧಾನಸೌಧದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಸಿ.ಎಂ.ಸಿದ್ಧರಾಮಯ್ಯ ಮಾಲಾರ್ಪಣೆ ಮಾಡಿದರು.

ಬಳಿಕ ಮಾತನಾಡಿ ನಾಡಪ್ರಭು ಕೆಂಪೇಗೌಡರ 515 ನೇ ಜನ್ಮದಿನೋತ್ಸವವನ್ನು ಸರ್ಕಾರ ರಾಜ್ಯಾದ್ಯಂತ ಆಚರಣೆ ಮಾಡುತ್ತಿದೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಜನಾನುರಾಗಿ ಪ್ರಭುಗಳು. ಕೃಷ್ಣದೇವರಾಯರ ಕಾಲದಲ್ಲಿ ಬೆಂಗಳೂರನ್ನು ಸ್ಥಾಪಿಸಿದ್ದಲ್ಲದೆ ಅನೇಕ ಕೆರೆಗಳನ್ನು ಕಟ್ಟಿಸಿದರು. ಅವರ ಕಾಲದಲ್ಲಿಯೇ ಅತಿ ಹೆಚ್ಚು ದೇವಸ್ಥಾನ, ಕೆರೆಗಳು ನಿರ್ಮಾಣವಾಯಿತು. ವೃತ್ತಿಯಾಧಾರದ ಮೇಲೆ ಚಿಕ್ಕಪೇಟೆ, ದೊಡ್ಡಪೇಟೆ, ನಗರ್ತಪೇಟೆ, ತಿಗಳರಪೇಟೆ, ಬಳೆಪೇಟೆಗಳನ್ನು ನಿರ್ಮಿಸಿ ನಗರವನ್ನು ವ್ಯಾಪಾರ ಕೇಂದ್ರವನ್ನಾಗಿಸಲು ಪ್ರಯತ್ನಪಟ್ಟರು.

ಮೊದಲಬಾರಿಗೆ ಕೆಂಪೇಗೌಡರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ತೀರ್ಮಾನ ಮಾಡಿದ್ದು, ಕೆಂಪೇಗೌಡರ ಪ್ರಾಧಿಕಾರ ರಚನೆ ಮಾಡಿದ್ದು ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಂಬುದನ್ನು ಹೆಮ್ಮೆಯಿಂದ ನೆನಪಿಸಬಯಸುತ್ತೇನೆ. ಕೆಂಪೇಗೌಡರ ದೂರದೃಷ್ಟಿಯ ಆಡಳಿತ ನಮಗೆಲ್ಲಾ ಪ್ರೇರಣೆಯಾಗಿದೆ ಎಂದರು.