ವರ್ಷಕ್ಕೆ 5,000 ಕೋಟಿ ಕೆ.ಕೆ.ಆರ್‌.ಡಿ.ಬಿ ಗೆ ಕೊಡುವುದಾಗಿ ಚುನಾವಣೆ ವೇಳೆ ಭರವಸೆ ನೀಡಿದ್ದೆವು. ನಮ್ಮ ಭರವಸೆಯಂತೆ ಇಲ್ಲಿಯವರೆಗೂ ₹13,000 ಕೋಟಿ ಹಣ ನೀಡಿದ್ದೇವೆ. ಇಲ್ಲಿಯವರೆಗೂ 5,300 ಕೋಟಿ ಮೊತ್ತ ಖರ್ಚಾಗಿದ್ದು, ಹಲವು ಕಾಮಗಾರಿಗಳ ಫಲ ಜನರಿಗೆ ತಲುಪಿದೆ ಎಂದು ಸಿ.ಎಂ.ಸಿದ್ಧರಾಮಯ್ಯ ಹೇಳಿದರು.
ಅವರು ಇಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಯಾದಗಿರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಆರೋಗ್ಯ ಆವಿಷ್ಕಾರ” ಯೋಜನೆಯ ಅಡಿಯಲ್ಲಿ ₹440.63 ಕೋಟಿ ಮೊತ್ತದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ, , ಬಂಜಾರ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಇದನ್ನೂ ಓದಿ  : ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗೃಹ ಸಚಿವರ ನೇತೃತ್ವದಲ್ಲಿ  ಪ್ರಗತಿ ಪರಿಶೀಲನಾ ಸಭೆ
ಕೆ.ಕೆ.ಆರ್‌.ಡಿ.ಬಿ ಗೆ ಕೊಡುವ ಈ ಅನುದಾನದ ಹೊರತಾಗಿ ಸರ್ಕಾರ ಈ ಭಾಗಕ್ಕೆ ಇಲಾಖಾವಾರು ಕಾರ್ಯಕ್ರಮಗಳಿಗಾಗಿ ಅನುದಾನ ನೀಡುತ್ತಲೇ ಇದೆ ಎಂದರು.  ನಂಜುಂಡಪ್ಪ ಅವರ ವರದಿಯ ಆಶಯಗಳನ್ನು ನಮ್ಮ ಸರ್ಕಾರ ಈಡೇರಿಸುತ್ತಿದೆ. ಆರೋಗ್ಯ, ಶಿಕ್ಷಣ, ಉದ್ಯೋಗದಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಸಾಧಿಸುವ ಜೊತೆಗೆ ಮೂಲಭೂತ ಸೌಕರ್ಯಗಳ ಈಡೇರಿಕೆಗೆ ಹಣ ವಿನಿಯೋಗ ಮಾಡಲು ಸೂಚನೆ ನೀಡಿದ್ದೇನೆ. ಇದರ ಪ್ರಕಾರ ಅಕ್ಷರ ಆವಿಷ್ಕಾರ ನಡೆದು ಇಂದು ₹440.63 ಕೋಟಿ ವೆಚ್ಚದ ಆರೋಗ್ಯ ಆವಿಷ್ಕಾರ ಕಾರ್ಯಕ್ರಮ ಇಂದು ಉದ್ಘಾಟನೆ ಮಾಡಿದ್ದೇವೆ ಎಂದರು.  ಕೊಲ್ಲೂರು ಮಲ್ಲಪ್ಪ ಅವರ ಸ್ಮಾರಕಕ್ಕೆ ಉಚಿತವಾಗಿ ಜಾಗ ಕೊಟ್ಟಿದ್ದೇವೆ. ಮಲ್ಲಪ್ಪ ಅವರು ಕಲ್ಯಾಣ ಕರ್ನಾಟಕದ ಗಾಂಧಿ ಎಂದು ಕರೆಸಿಕೊಂಡಿದ್ದವರು. ಸ್ವಾತಂತ್ರ್ಯ ಹೋರಾಟಗಾರರಾದ ಇವರ ಸ್ಮಾರಕ ಕೂಡಲೇ ಆಗಬೇಕು ಎಂದು ಸೂಚನೆ ನೀಡಿದ್ದೇನೆ.
42 ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ, ಹೊಸ ಆಸ್ಪತ್ರೆಗಳ ನಿರ್ಮಾಣ ಆಗುತ್ತಿದೆ. ಈ ಭಾಗದ ಆರೋಗ್ಯ ಸವಲತ್ತು ವಿಸ್ತರಿಸಲು ಒಟ್ಟು ₹847 ಕೋಟಿ ಕೊಡಲು ಸರ್ಕಾರ ಯೋಜನೆ ರೂಪಿಸಿದೆ. ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿರುವುದು ಆರ್ಥಿಕವಾಗಿ ರಾಜ್ಯ ಪ್ರಗತಿ ಪಥದಲ್ಲಿರುವುದಕ್ಕೆ ಸಾಕ್ಷಿ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಮನಮೋಹನ್ ಸಿಂಗ್ ಅವರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಸಂವಿಧಾನ ತಿದ್ದುಪಡಿ ಮಾಡಿ 371 ಜೆ ಜಾರಿ ಮಾಡಿದರು ಎಂದರು.
ಈ ಸಂದರ್ಭದಲ್ಲಿ  ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ರಾಜ್ಯಸಭೆಯ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರಾದ ಅಜಯ್ ಸಿಂಗ್ ಸೇರಿದಂತೆ ಹಲವು ಸಚಿವರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.