ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಬಿಜೆಪಿಯ ಹಸಿ ಸುಳ್ಳುಗಳಿಗೆ ತಕ್ಕ ಉತ್ತರ ನೀಡುವ ರೀತಿಯಲ್ಲಿ ಒಂದೇ ದಿನ ₹1,350 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿದ್ದೇವೆ ಎಂದು ಸಿ.ಎಂ.ಸಿದ್ಧರಾಮಯ್ಯ ಹೇಳಿದರು.
ಅವರು ಇಂದು ದಾವಣಗೆರೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಹೈಸ್ಕೂಲ್ ಮೈದಾನದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ, ಉದ್ಘಾಟನೆ ಹಾಗೂ ವಿವಿಧ ಇಲಾಖೆಯ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದರು.
ಜನರ ಮನೆ ಬಾಗಿಲಿಗೆ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳು ತಲುಪುತ್ತಿವೆ. ನಮ್ಮ ಬಳಿ ಹಣ ಇಲ್ಲದೇ ಹೋಗಿದ್ದರೆ ಒಂದೇ ದಿನ ₹1,350 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಾಧ್ಯವಿತ್ತೇ ಎಂದು ಪ್ರಶ್ನಿಸಿದರು.  ಇದನ್ನೂ ಓದಿ : ಕೇಂದ್ರ ಪುರಸ್ಕೃತ ಸಕ್ಷಮ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ LED TV ವಿತರಣೆ
ಐದೂ ಗ್ಯಾರಂಟಿಗಳೂ ಜಾರಿ ಆಗಿವೆ. ಬಿಜೆಪಿಯ ಮತದಾರರೂ ಸೇರಿ ಇಡೀ ರಾಜ್ಯದ ಜನತೆ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ.  ರಾಜ್ಯದ ಬಜೆಟ್ ಗಾತ್ರ ಹೆಚ್ಚಾಗಿರುವುದು ಮಾತ್ರವಲ್ಲದೆ, ಜಿಎಸ್‌ಟಿ ಸಂಗ್ರಹದಲ್ಲೂ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಇದು ರಾಜ್ಯದ ಆರ್ಥಿಕತೆ ಏರುಮುಖದಲ್ಲಿ, ಪ್ರಗತಿ ಪಥದಲ್ಲಿ ಇರುವುದಕ್ಕೆ ಸಾಕ್ಷಿ ಎಂದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದ ಜನರಿಗೆ ಒಂದೇ ಒಂದು ಮನೆ ಕೊಡಲಿಲ್ಲ. ಆದರೆ ನಾವು ಬರೀ ದಾವಣಗೆರೆ ಜಿಲ್ಲೆಯಲ್ಲಿ ಒಂದೇ ದಿನ ಪೌರ ಕಾರ್ಮಿಕ ವರ್ಗಕ್ಕೆ 1,892 ಮನೆಗಳನ್ನು ವಿತರಿಸಿದ್ದೇವೆ ಎಂದರು.
 ಉಪ ಚುನಾವಣೆಯಲ್ಲಿ ಶಿಗ್ಗಾಂವಿ, ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನೇ ಜನ ಸೋಲಿಸಿ ನಮಗೆ ಶಕ್ತಿ ತುಂಬಿದರು. ಸಂಡೂರಿನಲ್ಲೂ ನಾವೇ ಗೆದ್ದೆವು. ಮುಂದಿನ ಚುನಾವಣೆಯಲ್ಲೂ ನಾವೇ ಮತ್ತೆ ಗೆದ್ದು ಬರ್ತೀವಿ ಎನ್ನುವ ಭರವಸೆ ನನಗಿದೆ ಎಂದರು.
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ| ಜಿ.ಪರಮೇಶ್ವರ್‌, ಗಣಿ ಮತ್ತು ಭೂ ವಿಜ್ಞಾನಿ, ತೋಟಗಾರಿಕೆ ಸಚಿವರು ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಡಿ.ಸುಧಾಕರ್, ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಕೆ.ಎಸ್.ಬಸವಂತಪ್ಪ, ಬಾವರಾಜ ಶಿವಗಂಗಾ ಮುಂತಾದವರು ಉಪಸ್ಥಿತರಿದ್ದರು.