ಇದರ ಅಂಗವಾಗಿ 18 ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿದ್ದೇವೆ. ಇದರಲ್ಲಿ ಮೂರು ಪ್ರಶಸ್ತಿಗೆ 10 ಲಕ್ಷ ರೂಪಾಯಿ ನೀಡಲಾಗುತ್ತಿದೆ, ಉಳಿದ ಪ್ರಶಸ್ತಿಗಳಿಗೆ 5 ಲಕ್ಷ ರೂಪಾಯಿ ನೀಡಲಾಗುತ್ತಿದೆ. ಆದರೆ, ಪುರಸ್ಕೃತರ ಸಾಧನೆಗೆ ಈ ಹಣ ಸಮವಲ್ಲ, ಇದು ಕನ್ನಡ ಸಂಸ್ಕೃತಿಯ ಕೆಲಸಕ್ಕೆ ಕೊಡುವ ಗೌರವವಾಗಿದೆ.
ಬಹಳ ಮಂದಿ ಸಂಸ್ಕೃತಿ ವಿಚಾರದಲ್ಲಿ ಸಾಧನೆ ಮಾಡುತ್ತಲೇ ಇರುತ್ತಾರೆ. 2,000 ವರ್ಷಗಳ ಇತಿಹಾಸ ಇರುವ ಕನ್ನಡದ ಸಾಂಸ್ಕೃತಿಕ ಸಂಪತ್ತು ಇಡೀ ವಿಶ್ವಕ್ಕೆ ಮಾದರಿಯಾಗಿದೆ.
ಕನ್ನಡ ಸಂಸ್ಕೃತಿ, ಸಾಹಿತ್ಯದ ಕೆಲಸದಲ್ಲಿ ನಮ್ಮ ಸರ್ಕಾರ ಹಿಂದೆ ಬೀಳುವುದಿಲ್ಲ. ಇನ್ನೂ ಹೆಚ್ಚಿನ ಪ್ರೋತ್ಸಾಹ ಕೊಡುವ ಕೆಲಸವನ್ನು ನಾವು ಮಾಡುತ್ತೇವೆ. ನಮ್ಮ ಸರ್ಕಾರ ಸದಾ ಕನ್ನಡದ ಸಾಹಿತ್ಯ, ಸಂಸ್ಕೃತಿಯ ಪರವಾಗಿ ಇರಲಿದೆ.
ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗಿದ್ದವನು ನಾನು. ನಾನು ಸಾಹಿತ್ಯದ ವಿದ್ಯಾರ್ಥಿ ಅಲ್ಲ, ಆದರೆ ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುವವನು. ಕನ್ನಡ ಕರ್ನಾಟಕದಲ್ಲಿ ಸಾರ್ವಭೌಮ ಭಾಷೆ ಆಗಬೇಕು ಎನ್ನುವ ದಿಕ್ಕಿನಲ್ಲಿ ಬೇಷರತ್ ಬದ್ಧತೆ ಇಟ್ಟುಕೊಂಡು ನಾನು ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ ಎಂದರು.