ಬೆಂಗಳೂರಿನ ಆಡುಗೋಡಿ ಸಿಎಆರ್ ಕವಾಯತು ಮೈದಾನದಲ್ಲಿ ಇಂದು ಸಂಜೆ ನಡೆದ ‘ಬೆಂಗಳೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2025’ ಸಮಾರೋಪ ಸಮಾರಂಭದಲ್ಲಿ ಗೃಹ ಸಚಿವರಾದ ಡಾ|ಜಿ.ಪರಮೇಶ್ವರ್‌ ಅವರು ಪಾಲ್ಗೊಂಡು, ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು.
ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ. 3ರಷ್ಟು ಮೀಸಲಾತಿ ಕಲ್ಪಿಸಿದೆ. ಕ್ರೀಡಾ ಮೀಸಲಾತಿಯ ಸದ್ಬಳಕೆ ಮಾಡಿಕೊಂಡು 180 ಜನ ಪಿಎಸ್‌ಐ, ಪೇದೆ ಹುದ್ದೆಗಳಿಗೆ ನೇಮಕಾತಿ ಹೊಂದಿದ್ದಾರೆ‌. ಅದೇ ರೀತಿ, ಪೊಲೀಸ್ ಕುಟುಂಬದಿಂದ ಬಂದ ಮಕ್ಕಳಿಗೆ ಸಿಇಟಿ ಪರೀಕ್ಷೆಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದರು.
ಅರೋಪಿಗಳನ್ನು ಹಿಡಿಯುವುದರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಮುಂಚೂಣಿಯಲ್ಲಿದೆ. ಯಾವುದೇ ರೀತಿಯ ಘಟನೆಗಳು ನಡೆದಾಗ ಸ್ವಾಭಾವಿಕವಾಗಿ ಟೀಕೆಗಳು ಬರುತ್ತವೆ. ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿ, ಹೆಚ್ಚಿನ ಕೆಲಸದ ಮೂಲಕ ನಮ್ಮ ಸಾಮರ್ಥ್ಯವನ್ನು ತೋರಿಸಬೇಕು ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ‌.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್ ಹಾಗೂ ಜಂಟಿ ಪೊಲೀಸ್ ಆಯುಕ್ತರು ಉಪಸ್ಥಿತರಿದ್ದರು.