ಬಂಟ್ವಾಳ, ವಿದ್ಯಾಗಿರಿ ಶ್ರೀ ವೆಂಕಟರಮಣಸ್ವಾಮೀ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ
ಬಂಟ್ವಾಳ: ವಿದ್ಯಾರ್ಥಿಗಳು ಯೋಜನಾಬದ್ಧವಾಗಿ ಅಧ್ಯಯನ ಮಾಡಿದರೆ ತಮ್ಮ ಪಠ್ಯದೊಂದಿಗೆ ಸಂಗೀತ, ಅಭಿನಯ, ಕ್ರೀಡೆ ಇತ್ಯಾದಿ ವಿವಿಧ ಕಲೆಗಳಲ್ಲಿಯೂ ಮುಂದುವರೆಯುವುದು ಸಾಧ್ಯವಾಗುತ್ತದೆ. ಮಕ್ಕಳಿಗೆ ಮೊಬೈಲ್ ಬಳಕೆಯ ಗೀಳು ಹೆಚ್ಚುತ್ತಿದ್ದು ಇದಕ್ಕೆ ಪೋಷಕರೂ ಒಂದು ರೀತಿಯಲ್ಲಿ ಕಾರಣರಾಗುತ್ತಿದ್ದಾರೆ ಎಂದು ನಿವೃತ್ತ ಗಣಿತಶಾಸ್ತç ಪ್ರಾಧ್ಯಾಪಕ ಪ್ರೊ.ಟಿ.ಪ್ರಕಾಶ್ ಪ್ರಭು ನುಡಿದರು.
ಇವರು ಬಂಟ್ವಾಳ ವಿದ್ಯಾಗಿರಿಯ ಶ್ರೀ ವೆಂಕಟರಮಣಸ್ವಾಮೀ ಇಂಗ್ಲೀಷ್ ಮೀಡಿಯಂ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರಾಥಮಿಕ ಹಂತದಲ್ಲಿ ಓದಿನಲ್ಲಿ ಮುಂದಿರುವ ಕೆಲವು ವಿದ್ಯಾರ್ಥಿಗಳು ಉನ್ನತ ಅಧ್ಯಯನದ ಸಂದರ್ಭಗಳಲ್ಲಿ ಹಿಂದುಳಿಯುತ್ತಿದ್ದಾರೆ. ಅದಕ್ಕೆ ಅವರಲ್ಲಿ ತಾರ್ಕಿಕ ಜ್ಞಾನದ ಕೊರತೆ ಕಡಿಮೆಯಾಗುತ್ತಿರುವುದೇ ಕಾರಣ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ : ಬಂಟ್ವಾಳ: ಶ್ರೀ ವೆಂಕಟರಮಣಸ್ವಾಮೀ ಪದವಿ ಮತ್ತು ಪದವಿಪೂರ್ವ ಕಾಲೇಜು- ಪ್ರಶಸ್ತಿ ಪ್ರದಾನ ದಿನ
ಎಸ್.ವಿ.ಎಸ್.ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕಿ ಶ್ರೀಮತಿ ಕೆ ರೇಖಾ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಶ್ರೀ ಹರಿಪ್ರಸಾದ್ ಶಾಲಾ ವಾರ್ಷಿಕವರದಿ ವಾಚಿಸಿದರು. ಶ್ರೀಮತಿ ಶರ್ಮಿಳಾ ಅತಿಥಿಗಳನ್ನು ಪರಿಚಯಿಸಿ, ಶ್ರೀಮತಿ ಗೌತಮಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಚೈತ್ರಾ ಶೆಟ್ಟಿ ಸ್ವಾಗತಿಸಿ, ಪೂರ್ವಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಶ್ರೀಮತಿ ವೀಣಾ ದೇವಾಡಿಗ ವಂದಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿನಾಯಕ ತನೀಶ್ ಆರ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ಶಾನ್ ಸಜಿತ್ ಹಾಗೂ ಅನನ್ಯ ಪಿ ಭಟ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
