ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ (CSK) ವಿರುದ್ಧ ನಡೆದ ನಾಕೌಟ್‌ ಕದನದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಆರ್‌ಸಿಬಿ ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದರು. ರಾಜಕೀಯ ಒತ್ತಡದ ನಡುವೆಯೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಚಿವರೊಂದಿಗೆ ಕುಳಿತು ಪೂರ್ಣ ಪಂದ್ಯ ವೀಕ್ಷಣೆ ಮಾಡಿದ್ದಾರೆ.

ಈ ಕುರಿತು ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ, ಸತತ 6ನೇ ಗೆಲುವಿನೊಂದಿಗೆ ನಮ್ಮ ಆರ್‌ಸಿಬಿ ಪ್ಲೇಆಫ್ ಸುತ್ತಿಗೆ ಲಗ್ಗೆಯಿಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಿದ್ದು ಪಂದ್ಯದ ಪ್ರತಿ ಕ್ಷಣವನ್ನು ಆನಂದಿಸಿದೆ. ನಮ್ಮ ಆರ್‌ಸಿಬಿ ತಂಡದ ಐತಿಹಾಸಿಕ ಗೆಲುವಿನ ಕ್ಷಣಗಳಿಗೆ ಸಾಕ್ಷಿಯಾದುದ್ದು ಖುಷಿಕೊಟ್ಟಿದೆ. ಇದು ಆರ್.ಸಿ.ಬಿ ಯ ಹೊಸ ಅಧ್ಯಾಯ ಎಂದು ಬರೆದುಕೊಂಡಿದ್ದಾರೆ.

ಪ್ಲೇ ಆಫ್​ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 27 ರನ್​ ಗಳ ಗೆಲುವು ಸಾಧಿಸಿ ಈ ಅಭೂತಪೂರ್ವ ಸಾಧನೆ ಮಾಡಿದೆ. ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳಬೇಕಿತ್ತು. ಸದ್ಯ ಆರ್‌ಸಿಬಿ ತಂಡದ ಅದ್ಭುತ ಜಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಎಕ್ಸ್‌, ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಅಭಿಮಾನಿಗಳು ಆರ್‌ಸಿಬಿ ಪಂದ್ಯದ ಒಂದೊಂದೇ ದೃಶ್ಯಗಳನ್ನು ಹಂಚಿಕೊಳ್ಳುತ್ತಾ ಕೊಂಡಾಡುತ್ತಿದ್ದಾರೆ.

ಕ್ರಿಕೆಟ್‌ ಅಭಿಮಾನಿಗಳು ಬೆಂಗಳೂರಿನ ಬೀದಿ ಬೀದಿಗಳಲ್ಲಿ ಪಟಾಕಿ ಸಿಡಿಸಿ, ತಡರಾತ್ರಿ ವರೆಗೂ ಕುಣಿದು ಕುಪ್ಪಳಿಸಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ 218 ರನ್‌ ಸಿಡಿಸಿ, ಸಿಎಸ್‌ಕೆ ಗೆಲುವಿಗೆ 219 ರನ್‌ಗಳ ಗುರಿ ನೀಡಿತ್ತು. ಆದ್ರೆ ಸಿಎಸ್‌ಕೆ ಪ್ಲೇ ಆಫ್‌ ತಲುಪಲು 201 ರನ್‌ಗಳ ಅಗತ್ಯವಿತ್ತು. ಕೊನೆಯವರೆಗೂ ಹೋರಾಡಿದ ಸಿಎಸ್‌ಕೆ 27 ರನ್‌ ಗಳ ಅಂತರದಿಂದ ಸೋತು ಪ್ಲೇ ಆಫ್‌ ಪ್ರವೇಶಿಸುವ ಅರ್ಹತೆಯನ್ನೇ ಕಳೆದುಕೊಂಡಿತು.