ಬೆಳಗಾವಿ: ರೋಗಿಯ ಕೈಗೆ ಕೊಳಲು ಕೊಟ್ಟು ಊದಲು ಹೇಳಿ ವೈದ್ಯರು ಮೆದುಳು ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾದ ಘಟನೆ ಬೆಳಗಾವಿಯ ಆಸ್ಪತ್ರೆಯೊಂದರಲ್ಲಿ ನಡೆದಿದೆ.

ಕನ್ಹೇರಿ ಮಠದ ನರಶಸ್ತ್ರಚಿಕಿತ್ಸಕ ಡಾ. ಶಿವಶಂಕರ್ ಮರಜಕ್ಕೆ ಹಾಗೂ ಅರವಳಿಗೆ ತಜ್ಞ ಪ್ರಕಾಶ ಭರಮಗೌಡರಿಂದ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿರುವ ವೈದ್ಯರು. ಕೊಲ್ಲಾಪುರದ ಕನ್ಹೇರಿ ಮಠದ ಸಿದ್ಧಗಿರಿ ಆಸ್ಪತ್ರೆಯಲ್ಲಿ ಇಸ್ರೇಲ್‌ನಿಂದ ಬಂದಿದ್ದ ರೈತನಿಗೆ ಮೆದುಳಿನಲ್ಲಿ ಗಡ್ಡೆ ಬೆಳೆದಿತ್ತು. ಅದನ್ನು ಟ್ಯೂಮರ್ ಆಪರೇಷನ್ ಮಾಡಿ ಹೊರ ತೆಗೆಯಬೇಕಿತ್ತು. ಈ ಸಂದರ್ಭದಲ್ಲಿ ವೈದ್ಯರು ರೋಗಿಯ ಕೈಗೆ ಕೊಳಲು ಕೊಟ್ಟು ಊದಲು ಹೇಳಿದ್ದಾರೆ. ಸುಮಾರು 5 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ.

ಅವೇಕ್ ಕ್ರೇನಿಯೊಟಮಿ ಶಸ್ತ್ರಚಿಕಿತ್ಸೆಗೆ ಹೆಸರಾಗಿರುವ ಸಿದ್ದಗಿರಿ ಆಸ್ಪತ್ರೆ ಹೆಸರುವಾಸಿಯಾಗಿದೆ. ವೈದ್ಯರು ಈ ಹಿಂದೆ ರೋಗಿಗೆ ಐಸ್‌ಕ್ರೀಮ್ ಕೊಟ್ಟು ಆಪರೇಷನ್ ಮಾಡಿದ್ದರು. ವೈದ್ಯರ ತಂಡ ಈವರೆಗೂ ಒಟ್ಟು 103 ಮೆದುಳು ಶಸ್ತ್ರಚಿಕಿತ್ಸೆ ಮಾಡಿದೆ. ವೈದ್ಯರ ಸಾಧನೆಗೆ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಶ್ಲಾಘಿಸಿದ್ದಾರೆ.

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತಾವು ಮಾಡಿದ ಆಪರೇಷನ್ ಕುರಿತು ಡಾ ಶಿವಶಂಕರ್ ಮರಜಕ್ಕೆ ಮಾತನಾಡಿ, ಗಡ್ಡೆ ಬೆಳೆದ ಜಾಗದ ಪಕ್ಕದಲ್ಲಿ ಮಾತ್ರ ಅರಿವಳಿಕೆ ನೀಡಿ ಆಪರೇಷನ್ ಮಾಡಲಾಗಿದೆ. ಕೇವಲ 1.20 ಲಕ್ಷ ರೂ. ನಲ್ಲಿ ಶಸ್ತ್ರಚಿಕಿತ್ಸೆ ಸೇರಿ ಆಸ್ಪತ್ರೆ ಸಂಪೂರ್ಣ ವೆಚ್ಚ ಆಗಿದೆ ಎಂದರು.