ಬಂಟ್ವಾಳ: ಹಿಂದೂ ಧಾರ್ಮಿಕ ವಿಚಾರಗಳನ್ನು ತಿಳಿ ಹೇಳುವ ನಿಟ್ಟಿನಲ್ಲಿ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೆಲಸ ದೇವಸ್ಥಾನಗಳಿಂದ ಆಗಬೇಕಾಗಿದೆ ಎಂದು ಮಂಗಳೂರು ಕೊಂಚಾಡಿ ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ ಮೊಕ್ತೇಸರರಾದ ಬಾಲಕೃಷ್ಣ ಕೊಟ್ಟಾರಿ ಹೇಳಿದರು.

ಅವರು ಡಿ.27ರಂದು ಬಂಟ್ವಾಳ ತಾಲೂಕಿನ ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನದ ದ್ವಿತೀಯ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ, 32 ನೇ ವರ್ಷದ ಯಕ್ಷಗಾನ ಸೇವೆಯ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ದೇವಸ್ಥಾನದಲ್ಲಿ ನಿಷ್ಟೆಯಿಂದ ಕೆಲಸ ಮಾಡಿದರೆ ನಮಗೆ ಫಲ ದೊರಕುವುದು ನಿಶ್ಚಿತ. ಸಾರ್ವಭೌಮವಾದ ರಾಷ್ಟ್ರವಿದ್ದರೆ ಮಾತ್ರ ಧಾರ್ಮಿಕ ವಿಚಾರಗಳು ಉಳಿಯಬಹುದು. ಈ ದೆಸೆಯಲ್ಲಿ ದೇಶದ ಉಳಿವಿಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದರು.

ಮಾವಂತೂರು ಶ್ರೀ ಬಲವಾಂಡಿ ದೇವಸ್ಥಾನದ ಗಡಿಕಾರರು ದುರ್ಗಾದಾಸ್ ಶೆಟ್ಟಿ, ಇಂಜಿನಿಯರ್ ಶಿವಪ್ರಸಾದ್ ಕೊಟ್ಟಾರಿ, ಉದ್ಯಮಿಗಳಾದ ಜಯಪದ್ಮ ಎ. ಬೆಂಗಳೂರು, ಶ್ರೀನಿವಾಸ ಪೂಜಾರಿ ಮೆಲ್ಕಾರ್, ದಾಮೋದರ ಶೆಟ್ಟಿ ಪುಣೆ, ಬೊಂಡಾಲ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಜಯರಾಮ ಹೊಳ್ಳ ನಾಗ್ತಿಮಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ನಾಗೇಶ್ ಶೆಟ್ಟಿ ಬೊಂಡಾಲ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.