ಟೆಹ್ರಾನ್‌: ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿದ್ದಕ್ಕೆ ಸಿಟ್ಟಾಗಿರುವ ಇಸ್ರೇಲ್‌  ಟೆಹ್ರಾನ್‌ನಲ್ಲಿರುವ ಇರಾನಿನ ಸರ್ಕಾರಿ ಟಿವಿ ವಾಹಿನಿ IRIB(Islamic Republic of Iran Broadcasting) ಕಚೇರಿಯ ಮೇಲೆಯೇ ಬಾಂಬ್‌ ದಾಳಿ ನಡೆಸಿದೆ.

ಐಆರ್‌ಐಬಿ ನಿರೂಪಕಿಯೊಬ್ಬರು ಇಸ್ರೇಲ್‌ ದಾಳಿ ಕುರಿತಂತೆ ಸುದ್ದಿ ಓದುತ್ತಿದ್ದರು. ಈ ಸಂದರ್ಭದಲ್ಲೇ ಇಸ್ರೇಲ್‌ ಐಆರ್‌ಬಿ ಕಟ್ಟಡದ ಮೇಲೆಯೇ ಇಸ್ರೇಲ್‌ ವಾಯುಸೇನೆ ಬಾಂಬ್‌ ದಾಳಿ ನಡೆಸಿದೆ. ದಾಳಿ ಆಗುತ್ತಿದ್ದಂತೆ ನಿರೂಪಕಿ ಓಡಿ ಹೋಗಿದ್ದಾರೆ. ಗೋಡೆಗಳು ಉದುರುತ್ತಿರುವ ದೃಶ್ಯ ಸ್ಟುಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಇದನ್ನೂ ಓದಿ :  ಇರಾನ್‌ ಜನ ತಕ್ಷಣವೇ ಟೆಹ್ರಾನ್‌ ಖಾಲಿ ಮಾಡಿ: ಟ್ರಂಪ್‌ ಸೂಚನೆ

ಪಶ್ಚಿಮ ಏಷ್ಯಾದ ಇಸ್ರೇಲ್-ಇರಾನ್ ದೇಶಗಳ ಮಧ್ಯೆ ಯುದ್ಧೋನ್ಮಾದ ತಾರಕಕ್ಕೇರಿದ್ದು ಸುಮಾರು 2,000 ಕಿ.ಮೀ. ದೂರ ಇದ್ದರೂ ಎರಡೂ ರಾಷ್ಟ್ರಗಳು ಪರಸ್ಪರ ಖಂಡಾಂತರ ಕ್ಷಿಪಣಿಗಳು, ಡ್ರೋನ್‌ಗಳ ಮೂಲಕ ಸಂಘರ್ಷ ನಡೆಸುತ್ತಿವೆ. 4 ದಿನಗಳ ಈ ಯುದ್ಧದಲ್ಲಿ ಎರಡೂ ಕಡೆ ಈವರೆಗೆ 224 ಮಂದಿ ಸಾವನ್ನಪ್ಪಿದ್ದರೆ, 1,300ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಇಸ್ರೇಲ್‌ನ ಹೈಫಾ, ಟೆಲ್‌ಅವಿವ್ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿದೆ. ಹೈಫಾದ 2 ಪವರ್ ಪ್ಲಾಂಟ್‌ಗಳನ್ನು ಧ್ವಂಸಗೊಳಿಸಿದೆ. ಟೆಲ್‌ಅವಿವ್‌ನ ಪ್ರಧಾನಿ ನೆತನ್ಯಾಹು ಮನೆ ಮೇಲೆ ಮಿಸೈಲ್ ದಾಳಿ ಮಾಡಿದೆ. ನೆತನ್ಯಾಹು ಪಾರಾಗಿದ್ದಾರೆ. ಬೆನ್ನಲ್ಲೇ ಇಸ್ರೇಲ್ ಆಕ್ರಮಣವನ್ನು ಮತ್ತಷ್ಟು ತೀವ್ರಗೊಳಿಸಿದೆ. ಇರಾನ್‌ನ ತೈಲ-ಅನಿಲ ಘಟಕ, ಮಿಲಿಟರಿ ಸೆಂಟರ್‌ಗಳ ಮೇಲೆ ಇಸ್ರೇಲ್ ಬಾಂಬ್ ಮಳೆ ಸುರಿಸಿದೆ. ಇರಾನ್‌ನ ನಾಲ್ವರು ಗುಪ್ತಚರ ಅಧಿಕಾರಿಗಳು ಬಲಿಯಾಗಿದ್ದಾರೆ.

ಟೆಹ್ರಾನ್‌ನಲ್ಲಿರುವ ಶಹರಾನ್ ತೈಲ ಸಂಗ್ರಹಗಾರ ಧ್ವಂಸಗೊಳಿಸಿದೆ, ವಿದ್ಯುತ್, ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ. ಅಷ್ಟೇ ಅಲ್ಲ, ವಿಶ್ವದ ಅತಿದೊಡ್ಡ ಅನಿಲ ಕ್ಷೇತ್ರ ಸೌತ್ ಪಾರ್ಸ್ನಲ್ಲಿ ಅನಿಲ ಉತ್ಪಾದನೆಯನ್ನ ಸ್ಥಗಿತಗೊಳಿಸಿದೆ. ಇದರಿಂದ 12 ಮಿಲಿಯನ್ ಕ್ಯೂಬಿಕ್ ಗ್ಯಾಸ್ ಉತ್ಪಾದನೆ ಬಂದ್ ಆಗಿದ್ದು, ಅನಿಲ ದರ ಹೆಚ್ಚಾಗುವ ಎಲ್ಲಾ ಸಾಧ್ಯತೆ ಇದೆ.