ಮಂಗಳೂರು: ಸರಳ ಸಾಹಿತ್ಯದ ಮೂಲಕ ದೇವರನ್ನು ಒಲಿಸಲು ಭಜನೆ ಉಪಯುಕ್ತ. ಭಗವಂತನನ್ನು ತಲುಪುವ ಸುಲಭ ಮಾರ್ಗ ಅದು. ಭಜನೆ ಇದ್ದಲ್ಲಿ ವಿಭಜನೆ ಇಲ್ಲ ಎಂಬ ಮಾತಿದೆ. ಸಮಾಜವನ್ನು ಒಗ್ಗೂಡಿಸಲು, ಆಧ್ಯಾತ್ಮಿಕ ಜಾಗೃತಿಗೆ ಭಜನೆ ಸಹಕಾರಿ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಹೇಳಿದರು.
ಅವರು ಮಂಗಳಾದೇವಿ ವೃತ್ತದಿಂದ ರಾಮ ಕೃಷ್ಣ ಮಠದ ತನಕ ಸೋಮವಾರ ಸಂಜೆ ಮಕ್ಕಳ ಕುಣಿತ ಭಜನೆಯ ಶೋಭಾ ಯಾತ್ರೆಯ ಬಳಿಕ ಮಠದಲ್ಲಿ ಜರಗಿದ “ಭಜನ್ ಸಂಧ್ಯಾ’ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರು ಭಜನೆಯನ್ನು ಬಹಳ ಇಷ್ಟಪಡುತ್ತಿದ್ದರು, ಅಷ್ಟೇ ಅಲ್ಲ ಸ್ವತಃ ಸುಶ್ರಾವ್ಯವಾಗಿ ಹಾಡುತ್ತಿದ್ದರು ಎಂದರು.
ಗಾಯಕ ವಿದ್ಯಾಭೂಷಣ ಅವರು “ಭಜನ್ ಸಂಧ್ಯಾ’ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ನಿಟ್ಟೆ ವಿ.ವಿ. ಕುಲಾಧಿಪತಿ ಎನ್. ವಿನಯಹೆಗ್ಡೆ, ಕಟೀಲು ಕ್ಷೇತ್ರದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಎಸ್.ಸಿ.ಎಸ್. ಆಸ್ಪತ್ರೆಯ ಚೇರ್ಮನ್ ಡಾ| ಜೀವರಾಜ್ ಸೊರಕೆ ಭಾಗವಹಿಸಿದ್ದರು. ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಎಂಆರ್ಪಿಎಲ್ ನಿರ್ದೇಶಕ ಬಿ.ಎಚ್.ವಿ. ಪ್ರಸಾದ್, ಡಾ| ಗಣೇಶ್, ಮುಖಂಡರಾದ ಸಂಜಯ ಪ್ರಭು, ಸುನಿಲ್ ಆಚಾರ್ ಉಪಸ್ಥಿತರಿದ್ದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಸ್ವಾಗತಿಸಿ, ರಂಜನ್ ಬೆಳ್ಳರ್ಪಾಡಿ ವಂದಿಸಿದರು. ಅರುಣ್ ಉಳ್ಳಾಳ ನಿರೂಪಿಸಿದರು.
ಆಕರ್ಷಕ ಕುಣಿತ ಭಜನೆ ಮಂಗಳಾದೇವಿ ವೃತ್ತದಿಂದ ಮಂಗಳೂರು ರಾಮಕೃಷ್ಣ ಮಠದ ತನಕ ಸೋಮವಾರ ಸಂಜೆ ಜರಗಿದ ಮಕ್ಕಳ ಆಕರ್ಷಕ ಕುಣಿತ ಭಜನೆಯ ಶೋಭಾಯಾತ್ರೆ ಪರಿಸರದಲ್ಲಿ ವಿಶಿಷ್ಟ ಆಧ್ಯಾತ್ಮಿಕ ಪರಿಸರವನ್ನು ನಿರ್ಮಿಸಿತು. 400ಕ್ಕೂ ಅಧಿಕ ಮಕ್ಕಳ ಸಹಿತ 800 ಮಂದಿ ಕುಣಿತ ಭಜನೆಯಲ್ಲಿ ಭಾಗವಹಿಸಿದ್ದರು.