ಬಳ್ಳಾರಿ: ಕುರಿ ಮೇಯಿಸಲು ಹೋದಾಗ ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ದಾರುಣವಾಗಿ ಮೃತಪಟ್ಟು, ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ನಡೆದಿದೆ.

ರಾರಾವಿ ಗ್ರಾಮದ ಭೀರಪ್ಪ (45), ಸುನೀಲ್ (26) ಮೃತ ದುರ್ದೈವಿಗಳುದ್ಸಿಡಿಲು ಬಡಿದ ಪರಿಣಾಮ ವಿನೋದ್ (14) ಗಂಭೀರ ಗಾಯಗೊಂಡಿದ್ದಾನೆ. ಒಂದೇ ಕುಟುಂಬದ ಭೀರಪ್ಪ, ಸುನೀಲ್ ಹಾಗೂ ವಿನೋದ್ ಕುರಿ ಮೇಯಿಸಲು ಹೋದಾಗ, ಮಳೆ ಬಂದಿದ್ದರಿಂದ ಮರದ ಆಶ್ರಯ ಪಡೆದಿದ್ದರು. ಮರದ ಕೆಳಗೆ ನಿಂತಾಗ ಸಿಡಿಲು ಬಡಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗಂಭೀರ ಗಾಯಗೊಂಡಿರುವ ವಿನೋದ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಇಡೀ ರಾರಾವಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಿರಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.