ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ “ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ”ಗೆ ಭಾಜನರಾಗಿ ಜಾಗತಿಕ ಮಟ್ಟದಲ್ಲಿ ಕನ್ನಡ ನಾಡು – ನುಡಿಯ ಶ್ರೇಯ ಹೆಚ್ಚಿಸಿರುವ ಶ್ರೀಮತಿ ಭಾನು ಮುಷ್ತಾಕ್ ಹಾಗೂ ಶ್ರೀಮತಿ ದೀಪಾ ಭಸ್ತಿ ಅವರನ್ನು ಅಭಿನಂದಿಸಿ, ಸನ್ಮಾನಿಸಿ ಮಾತನಾಡಿದರು.
ಪತ್ರಕರ್ತೆಯಾಗಿ, ಲೇಖಕಿಯಾಗಿ, ವಕೀಲರಾಗಿ, ಹೋರಾಟಗಾರ್ತಿಯಾಗಿ ಸಮಾಜದಲ್ಲಿ ತೊಡಗಿಸಿಕೊಂಡಿರುವುದೇ ಬಾನು ಮುಷ್ತಾಕ್ ಅವರ ಬರವಣಿಗೆಯ ಶಕ್ತಿ. ಲಂಕೇಶ್ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಬರೆಯುತ್ತಲೇ, ವಕೀಲೆಯಾಗಿ ಬಡವರ ಪರ ವಕಾಲತ್ತು ವಹಿಸುತ್ತಾ, ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಲಭಿಸಿರುವುದೇ ಬಾನು ಮುಷ್ತಾಕ್ ಅವರ ಬರವಣಿಗೆಗಳಲ್ಲಿ ಸಮಾಜಮುಖಿ ಸತ್ವ ಇದೆ ಎನ್ನುವುದಕ್ಕೆ ಸಾಕ್ಷಿ.
ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಧ್ವನಿಯಾಗಿ ಮೌಡ್ಯ ವಿರೋಧಿಸಿ ಬರೆಯುವ ಪ್ರಗತಿಪರ ಎದೆಗಾರಿಕೆ ಬಾನು ಅವರಲ್ಲಿದೆ. ಸಾಹಿತ್ಯದ ಮೂಲಕ ಮಾನವೀಯ ಸಂದೇಶ ನೀಡುವ ಜವಾಬ್ದಾರಿ ಬಾನು ಮುಷ್ತಾಕ್ ಅವರು ನಿರ್ವಹಿಸಿದ್ದಾರೆ.
ಇಂಥದ್ದೊಂದು ಮೇರು ಪ್ರಶಸ್ತಿಗೆ ಭಾಜನರಾದ ಬಾನು ಅವರನ್ನು ಸನ್ಮಾನಿಸುವುದು ಕನ್ನಡಿಗನಾಗಿ ನನಗೆ ಸಂತೋಷದ ವಿಷಯ. ಇಂತಹ ಇನ್ನಷ್ಟು ಬರಹಗಳು ಅವರಿಂದ ಹೊರಬರಲಿ ಎಂದು ಹಾರೈಸಿದರು.