ಭುವನೇಶ್ವರ: ತಿರುವಂತನಪುರಂನಲ್ಲಿರುವ ಪದ್ಮನಾಭ ದೇವಸ್ಥಾನ ತಳ ಮಹಡಿಯಲ್ಲಿ ದೊಡ್ಡ ಪ್ರಮಾಣ ಪುರಾತನ ಕಾಲದ ಚಿನ್ನಾಭರಣ ಪತ್ತೆಯಾಗಿತ್ತು. ಇದು ಇಡೀ ದೇಶದ ಗಮನ ಸೆಳೆದಿತ್ತು. ಅಂತಹದೇ ಮತ್ತೊಂದು ಘಟನೆ ಈಗ ಒಡಿಶಾದ ಪುರಿಯಲ್ಲಿ ನಡೆಯಬಹುದಾ ಎನ್ನುವ ಕುತೂಹಲ ಮನೆ ಮಾಡಿದೆ. 46 ವರ್ಷಗಳ ಬಳಿಕ ಪುರಿಯ ಜಗನ್ನಾಥ ದೇವಾಲಯದ ರತ್ನ ಭಂಡಾರದ ಬಾಗಿಲನ್ನು ತೆರೆಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಅಲ್ಲಿರುವ ಪುರಾತನ ಚಿನ್ನಾಭರಣ, ವಜ್ರ, ವೈಡೂರ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗತೊಡಗಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ಪುರಿ ಜಗನ್ನಾಥ ದೇಗುಲ ರತ್ನ ಭಂಡಾರದ ಬಾಗಿಲು ತೆರೆಯಲು ಮುಂದಾದ ಸರ್ಕಾರ

1985ರ ಜುಲೈ 14ರಂದು ಬಲಭದ್ರ ದೇವರ ಚಿನ್ನಾಭರಣಗಳ ಪತ್ತೆಗಾಗಿ ರತ್ನ ಭಂಡಾರವನ್ನು ಕೊನೆಯ ಬಾರಿಗೆ ತೆರೆಯಲಾಗಿತ್ತು. ರತ್ನ ಭಂಡಾರದಲ್ಲಿ ಎಷ್ಟು ನಿಧಿಗಳಿವೆ ಎಂಬ ಬಗ್ಗೆ 1978ರ ಮೇ 13ರಿಂದ ಜುಲೈ 13ರವರೆಗೆ ಲೆಕ್ಕಾಚಾರ ಹಾಕಲಾಗಿದ್ದು, ಇದು ಕೊನೆಯದಾಗಿ ನಡೆದ ಲೆಕ್ಕಾಚಾರವಾಗಿತ್ತು. ಆ ಬಳಿಕ ರತ್ನ ಭಂಡಾರದೊಳಗೆ ವಿಷಕಾರಿ ಸರ್ಪಗಳು, ನಾಗರ ಹಾವುಗಳು ಕಾವಲು ಕಾಯುತ್ತಿರುವ ಬಗ್ಗೆ ದಂತಕಥೆಗಳು, ಜಾನಪದ ಕಥೆಗಳು ಹುಟ್ಟಿಕೊಂಡಿದ್ದವು, ಹೀಗಾಗೀ ಬಾಗಿಲು ತೆರೆಯುವ ಸಾಹಸ ಮಾಡಲು ಯಾವ ಸರ್ಕಾರ ಹೋಗಿರಲಿಲ್ಲ.

ಬರೋಬ್ಬರಿ 45 ವರ್ಷಗಳ ಬಳಿಕ ರತ್ನ ಭಂಡಾರದ ಬಾಗಿಲು ತೆರೆಯಲ್ಲಿದ್ದು, ಅಲ್ಲಿರುವ ಪುರಾತನ ಚಿನ್ನಾಭರಣ, ವಜ್ರ, ವೈಡೂರ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗತೊಡಗಿದೆ. ಅದರ ಜೊತೆಗೆ ಅಲ್ಲಿ ವಾಸವಾಗಿರುವ ಹಾವುಗಳ ಬಗ್ಗೆಯೂ ಅಧಿಕಾರಿಗಳಿಗೆ ಅಷ್ಟೇ ಭಯ ಹುಟ್ಟಿಸಿದೆ. ಹೀಗಾಗೀ ನುರಿತ ಉರಗ ತಜ್ಞರು ವೈದ್ಯರ ತಂಡ, ಅಂಬುಲೆನ್ಸ್‌ ಸನ್ನದ್ಧವಾಗಿಟ್ಟುಕೊಳ್ಳಲಾಗಿದೆ.

ಸಂಪತ್ತು ಎಷ್ಟಿದೆ?
ಜಗನ್ನಾಥ ದೇವಸ್ಥಾನದ ರತ್ನ ಭಂಡಾರದಲ್ಲಿ ಇರುವ ಅಮೂಲ್ಯ ವಜ್ರ ವೈಡೂರ್ಯ, ಚಿನ್ನಾಭರಣಗಳನ್ನು ಬಳಸಿಕೊಂಡರೆ ವಿಶ್ವದ ಹಲವು ಬಡ ರಾಷ್ಟ್ರಗಳ ಆರ್ಥಿಕತೆಯನ್ನು ಸುಧಾರಿಸಬಹುದಂತೆ. 2018 ರಲ್ಲಿ, ಆಗಿನ ಕಾನೂನು ಸಚಿವ ಪ್ರತಾಪ್ ಜೆನಾ ಅವರು ‘ರತ್ನ ಭಂಡಾರ್’ 12,831 ಭಾರಿ (ಒಂದು ಭಾರಿ 11.66 ಗ್ರಾಂಗೆ ಸಮ) ಚಿನ್ನಾಭರಣಗಳನ್ನು ಹೊಂದಿದೆ. 22,153 ಭಾರಿ ಬೆಳ್ಳಿ ಪಾತ್ರೆಗಳು ಮತ್ತು ಇತರ ವಸ್ತುಗಳನ್ನು ಅಮೂಲ್ಯವಾದ ಕಲ್ಲುಗಳಿಂದ ಅಳವಡಿಸಲಾಗಿದೆ ಎಂದು ರಾಜ್ಯ ವಿಧಾನಸಭೆಗೆ ತಿಳಿಸಿದ್ದರು.

ದೇವಾಲಯದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ವ್ಯಕ್ತಿಗಳ ಪ್ರಕಾರ ರತ್ನ ಭಂಡಾರವು ಮೂರು ಭಾಗಗಳನ್ನು ಒಳಗೊಂಡಿದೆ. ಹೊರಗಿನ ಕೋಣೆಯಲ್ಲಿ ದೇವಸ್ಥಾನದ ಆಚರಣೆಗಳಲ್ಲಿ ಬಳಸುವ ಆಭರಣ, ಒಳಗಗಿನ ಕೊಠಡಿಯಲ್ಲಿ ದೇವಸ್ಥಾನ ಬಳಸದ ಆಭರಣ ಮತ್ತು ರಾಜರು ಮತ್ತು ಭಕ್ತರು ದಾನ ಮಾಡಿದ ಇತರ ಅಮೂಲ್ಯ ವಸ್ತುಗಳನ್ನು ಹೊಂದಿದೆ.

ಬಾಗಿಲು ತೆರೆಯಿರಿ ಎಂದಿದ್ದ ಸುಪ್ರೀಂ
2018ರಲ್ಲಿ ಸುಪ್ರೀಂಕೋರ್ಟ್ ಪುರಾತತ್ವ ಇಲಾಖೆಗೆ ರತ್ನ ಭಂಡಾರದ ಆಭರಣಗಳನ್ನು ಪರಿಶೀಲಿಸುವಂತೆ ಆದೇಶಿಸಿತ್ತು. ಈ ಸಂದರ್ಭದಲ್ಲಿ ದೇವಾಲಯಕ್ಕೆ ಪರಿಶೀಲನೆಗಾಗಿ ಆಗಮಿಸಿದ್ದ ಎಎಸ್ಐ ಅಧಿಕಾರಿಗಳ ತಂಡಕ್ಕೆ ದೇವಾಲಯದ ಕೀಲಿ ಕೈ ನಾಪತ್ತೆಯಾಗಿದೆ ಎಂದು ತಿಳಿಸಿದ್ದರು‌. ಇದೀಗ ಹೆಚ್ಚುವರಿಯಾಗಿ ಇರುವ ಕೀ ಮೂಲಕ ಬೀಗ ತೆರೆಯಲು ಪ್ರಯತ್ನ ನಡೆಯಲಿದೆ. ಒಂದು ವೇಳೆ ಆ ಕೀಯಿಂದಲೂ ಬಾಗಿಲು ತೆರೆಯದಿದ್ದರೆ, ಬಾಗಿಲನ್ನು ಒಡೆದು ರತ್ನ ಭಂಡಾರದಲ್ಲಿರುವ ಚಿನ್ನಾಭರಣಗಳ ಲೆಕ್ಕಾಚಾರ ನಡೆಯಲಿದೆ.