– 20 ದಿನಗಳ ಬಳಿಕ ಯೋಧನನ್ನು ಭಾರತಕ್ಕೆ ಹಸ್ತಾಂತರಿಸಿದ ಪಾಕ್
– ಆಕಸ್ಮಿಕವಾಗಿ ಗಡಿ ದಾಟಿದ್ದ ಸೈನಿಕನನ್ನು ಬಂಧಿಸಿದ್ದ ಪಾಕಿಸ್ತಾನ
ಚಂಡೀಗಢ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಕ್ಸಸ್ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಪಾಕಿಸ್ತಾನ ಬಂಧಿಸಿದ್ದ ಬಿಎಸ್‌ಎಫ್ ಯೋಧ ಪೂರ್ಣಮ್ ಕುಮಾರ್ ಶಾ ಭಾರತಕ್ಕೆ ವಾಪಸ್ ಆಗಿದ್ದಾರೆ.
ಆಕಸ್ಮಿಕವಾಗಿ ಫಿರೋಜ್‌ಪುರ ವಲಯದಲ್ಲಿ ಗಡಿ ದಾಟಿದ್ದ ಬಿಎಸ್‌ಎಫ್ ಯೋಧನನ್ನು ಬಂಧಿಸಿದ್ದ ಪಾಕ್ ರೇಂಜರ್‌ಗಳು 20 ದಿನಗಳ ಬಳಿಕ ಇಂದು ಅಟ್ಟಾರಿ ಗಡಿ ಮೂಲಕ ಬಿಡುಗಡೆಗೊಳಿಸಿದೆ.
ಬಿಎಸ್‌ಎಫ್ ಮಾಹಿತಿ ಪ್ರಕಾರ, ಇಂದು ಬೆಳಗ್ಗೆ 10:30ರ ಸುಮಾರಿಗೆ ಅಟ್ಟಾರಿ – ವಾಘಾ ಗಡಿಯಲ್ಲಿ ಬಿಎಸ್‌ಎಫ್ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು ಬಿಡುಗಡೆಗೊಳಿಸಿದೆ.
ಬಿಎಸ್‌ಎಫ್ ತನ್ನ ಸೈನಿಕರಿಗೆ ಗಡಿಯಲ್ಲಿ ಗಸ್ತು ತಿರುಗುವಾಗ ಜಾಗರೂಕರಾಗಿರಲು ಕಟ್ಟುನಿಟ್ಟಿನ ಸಲಹೆಯನ್ನು ನೀಡುತ್ತದೆ. ಏ.23ರಂದು ಪಂಜಾಬ್‌ನ ಫಿರೋಜ್‌ಪುರ ಬಳಿ ಕರ್ತವ್ಯದಲ್ಲಿದ್ದ 182ನೇ ಬೆಟಾಲಿಯನ್ ಕಾನ್‌ಸ್ಟೇಬಲ್ ಪೂರ್ಣಮ್ ಕುಮಾರ್ ಶಾ ಅವರು ವಿಶ್ರಾಂತಿ ಪಡೆಯಲು ಮರದ ಕೆಳಗೆ ಕುಳಿತುಕೊಳ್ಳಲು ಹೊರಟಾಗ ಆಕ್ಮಸಿಕವಾಗಿ ಗಡಿದಾಟಿದ್ದರು. ಈ ವೇಳೆ ಅವರನ್ನು ಪಾಕಿಸ್ತಾನ ರೇಂಜರ್‌ಗಳು ಬಂಧಿಸಿದ್ದರು.
ಅದಾದ ಬಳಿಕ ಬಿಎಸ್‌ಎಫ್ ಯೋಧನ ಬಿಡುಗಡೆಗಾಗಿ ಪಾಕ್ ರೇಂಜರ್‌ಗಳೊಂದಿಗೆ ನಿರಂತರ ಸಭೆ ನಡೆಸಲಾಗಿತ್ತು. ಮಾತುಕತೆಯ ಹೊರತಾಗಿಯೂ ರೇಂಜರ್‌ನನ್ನ ಭಾರತಕ್ಕೆ ಹಸ್ತಾಂತರಿಸಲು ನಿರಾಕರಿಸಿದ್ದರು.