ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಶೋಕಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ 245 ವೀಳ್ಯದೆಲೆ ಬೆಳೆಗಾರರಿಗೆ ತಲಾ 0.5 ಗುಂಟೆ ಜಾಗ ನೀಡುವುದು ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳನ್ನು ಸಿ.ಎಂ.ಸಿದ್ಧರಾಮಯ್ಯ ಉದ್ಘಾಟಿಸಿದರು.

ಬಳಿಕ ಮಾತನಾಡಿ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ, ಈರನಗೆರೆ ಬದನೆಕಾಯಿ ಮೈಸೂರಿನ ಹೆಮ್ಮೆಯ ಸಾಂಪ್ರದಾಯಿಕ ಬೆಳೆಗಳಾಗಿದ್ದು ಈ ಬೆಳೆಗಳ ರಕ್ಷಣೆ, ವಿಸ್ತರಣೆಗೆ ಸರ್ಕಾರದಿಂದ ಕಾರ್ಯಕ್ರಮ ಘೋಷಣೆ ಮಾಡುತ್ತೇನೆ ಎಂದರು.

ಅಶೋಕಪುರಂನ‌ ಅಭಿವೃದ್ಧಿಗಾಗಿ ಅಗತ್ಯ ಇರುವ ಎಲ್ಲಾ ಕಾರ್ಯಕ್ರಮಗಳ ಪಟ್ಟಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಅವರಿಗೆ ಸೂಚಿಸಿದ್ದೇನೆ. ಅಗತ್ಯ ಅನುದಾನ ಕೊಡಲು ಸರ್ಕಾರ ಬದ್ದವಾಗಿದೆ. ನಾವೆಲ್ಲಾ ಅಂಬೇಡ್ಕರ್ ವಾದಿಗಳು. ಅವಕಾಶಗಳಿಂದ ವಂಚಿತರಾದವರೆಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವುದು ನಮ್ಮ ಸಂವಿಧಾನದ ಆಶಯವಾಗಿದೆ.

ಸಂವಿಧಾನ ಜಾರಿ ಸಭೆಯಲ್ಲಿ ಅಂಬೇಡ್ಕರ್ ಅವರು ಮಾಡಿದ 10 ಸಂಪುಟಗಳ ಭಾಷಣವನ್ನು ನಾನು ಕನ್ನಡಕ್ಕೆ ಅನುವಾದ ಮಾಡಿಸಿದ್ದೇನೆ. ಈ ಎಲ್ಲವನ್ನೂ ಪ್ರತಿಯೊಬ್ಬರೂ ಓದಬೇಕು. ನಾನು ಮುಖ್ಯಮಂತ್ರಿ ಆಗಿದ್ದೇ ಅಂಬೇಡ್ಕರ್ ಅವರ ಸಂವಿಧಾನದಿಂದ. ಬಾಬಾ ಸಾಹೇಬರಿಗೆ ನಾನು ಸದಾ ಕೃತಜ್ಞ.

ನನ್ನ ರಾಜಕೀಯ ಬದುಕಿನಲ್ಲಿ ನಯಾಪೈಸೆ ಭ್ರಷ್ಟ ಹಣಕ್ಕಾಗಿ ಕೈಚಾಚಿಲ್ಲ. ಆತ್ಮಸಾಕ್ಷಿಯಾಗಿ ನಾನು ಸರಿಯಾಗಿದ್ದೀನಿ. ಹೀಗಾಗಿ ನಾನು ಹೆದರುವ, ಜಗ್ಗುವ-ಬಗ್ಗುವ ಪ್ರಶ್ನೆಯೇ ಇಲ್ಲ. ಜನರ ಆಶೀರ್ವಾದ, ನಿಮ್ಮೆಲ್ಲರ ಬೆಂಬಲ ಇರುವವರೆಗೂ ನಾನು ಅಲ್ಲಾಡುವುದಿಲ್ಲ.
ಬಹಳ ಜನ ಬಂದು ಬಂದು ನನಗೆ, “ಧೈರ್ಯವಾಗಿರಿ, ರಾಜೀನಾಮೆ ಕೊಡಬೇಡಿ” ಅಂತಾರೆ. ನಾನು ಷಡ್ಯಂತ್ರಗಳಿಗೆ ಹೆದರುವವನೇ ಅಲ್ಲ. ರಾಜಕೀಯವಾಗಿ ನನಗೆ ಒಂದೆರಡು ತಿಂಗಳು ತೊಂದರೆ ಕೊಡಬಹುದು. ಆದರೆ ಕಾನೂನಾತ್ಮಕವಾಗಿ ನಾನು ಗೆದ್ದೇ ಗೆಲ್ತೇನೆ. ರಾಜಕೀಯವಾಗಿ ಇದನ್ನೆಲ್ಲಾ ಎದುರಿಸಿ ನಿಲ್ಲೋದು ನನಗೆ ಗೊತ್ತಿದೆ ಎಂದರು.