ಮಕ್ಕಳು ಯಾವುದೇ ಉನ್ನತ ಹುದ್ದೆ ಹಿಡಿದರೂ ತಂದೆ-ತಾಯಿಯರು, ಗುರು-ಹಿರಿಯರು ಮತ್ತು ದೇಶದ ಮೇಲೆ ಅಭಿಮಾನ ಇಟ್ಟುಕೊಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೇಳಿದರು.

ಅವರು ಡಿ.30 ರಂದು ಅಡ್ಡೂರು ಸಹರಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮನೆ, ಸಮುದಾಯ, ಸಮಾಜ ಮತ್ತು ದೇಶಕ್ಕೆ ಒಳ್ಳೆಯದು ಬಯಸುವ ಮಕ್ಕಳು ಈ ದೇಶದ ಆಸ್ತಿ. ಭವಿಷ್ಯ ದಿನಗಳಲ್ಲಿ ನಿಮ್ಮಿಂದ ಕಲಿತ ಶಾಲೆಯ ಅಭಿವೃದ್ಧಿಯ ಕೆಲಸಗಳಾಗಲಿ ಎಂದು ಹಾರೈಸಿದರು.

ಶಾಲಾ ಮಕ್ಕಳು ಸಾದರಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದಾಗ ಇಲ್ಲಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಶಿಕ್ಷಕ ವರ್ಗ ಮತ್ತು ಆಡಳಿತ ಮಂಡಳಿ ಇರುವುದು ವೇದ್ಯವಾಗುತ್ತದೆ. ಶಾಲಾ ಮೈದಾನಕ್ಕೆ ವೈಯಕ್ತಿಕ ನೆರವಿನೊಂದಿಗೆ ಸರ್ಕಾರದಿಂದ ಅಗತ್ಯ ಅನುದಾನ ತರಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಯು. ಪಿ. ಇಬ್ರಾಹಿಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಎ. ಕೆ. ಇಸ್ಮಾಯಿಲ್, ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್(ಎಂಡಬ್ಲ್ಯೂಎ-ಅಡ್ಡೂರು) ಇದರ ಗೌರವಾಧ್ಯಕ್ಷ ಎಂ. ಎಚ್. ಮೈಯ್ಯದ್ದಿ, ಎಂಡಬ್ಲ್ಯೂಎ ಉಪಾಧ್ಯಕ್ಷ ಅಹಮ್ಮದ್ ಬಾವಾ ಮತ್ತು ಎನ್. ಇ. ಮೊಹಮ್ಮದ್, ಎಂಡಬ್ಲ್ಯೂಎ ಸಲಹೆಗಾರರಾದ ಡಾ. ಸಿದ್ಧಿಕ್ ಅಡ್ಡೂರು ಮತ್ತು ಅಬ್ದುಲ್ ಖಾದರ್ ಇಡ್ಮ, ಎಂಡಬ್ಲ್ಯೂಎ ಖಜಾಂಚಿ ಹಾಗೂ ಗುರುಪುರ ಗ್ರಾ. ಪಂ. ಸದಸ್ಯ ಎ. ಕೆ. ಅಶ್ರಫ್, ಪಿಟಿಎ ಅಧ್ಯಕ್ಷ ವಿಶ್ವಾಂಭರ, ಸಹರಾ ಸಮೂಹ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಕೇಶವ ಎಚ್. ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಇನಾಯತ್ ಅಲಿ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. 2022-23ರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 96.64(604)ಅಂಕ ಗಳಿಸಿದ ಮಾನಸ್ ಡಿ. ಅಮ್ಮುಂಜೆ ಅವರನ್ನು ನಗದು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಶಾಲಾ ಮಕ್ಕಳಿಂದ ಮನಮೋಹಕ ನೃತ್ಯ, ಪ್ರಹಸನದಂತಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶಿಕ್ಷಕ ವರ್ಗ ಮತ್ತು ಶಾಲಾ ಆಡಳಿತ ಮಂಡಳಿ, ಎಂಡಬ್ಲ್ಯೂಎ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಯು. ಪಿ. ಇಬ್ರಾಹಿಂ ಸ್ವಾಗತಿಸಿ, ಉಪನ್ಯಾಸಕಿ ಕಿಶೋರಿ ವಂದಿಸಿದರು. ಶಿಕ್ಷಕಿಯರಾದ ಹರ್ಷಿತಾ, ಶಿಫಾಲಿ ಮತ್ತು ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.