ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿಯಾಗಿ ಒಟ್ಟು 28 ಸ್ಥಾನದಲ್ಲಿದಲ್ಲಿ ಗೆಲುವು ಸಾಧಿಸುವುದು ನಿಶ್ವಿತ, ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಅವರು ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರದಲ್ಲಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವುದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ರಕ್ತದಲ್ಲಿ ಹಿಂದುತ್ವದ ಕಣಗಳಿರುವ ದ.ಕ.ಜಿಲ್ಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ‌ಅವರನ್ನು 3 ಲಕ್ಷಗಿಂತಲೂ ಅಧಿಕ ಮತಗಳಿಂದ ಗೆಲ್ಲಿಸಿ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ದಿನದ ಒಂದು ಗಳಿಗೆಯೂ ವಿಶ್ರಾಂತಿ ಪಡೆಯದೆ ನಿರಂತರವಾಗಿ ದೇಶದ ಬಗ್ಗೆ ಚಿಂತನೆ ಮಾಡುವ ,ನುಡಿದಂತೆ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಗತ್ತಿನಲ್ಲಿ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ.

ದೇಶದಲ್ಲಿ ವಯಸ್ಸಿನ ಇತಿಮಿತಿ‌ ಇಲ್ಲದೆ ಮೊದಿಯವರ ಪರ ಒಲವು , ಆತ್ಮ ವಿಶ್ವಾಸವಿದ್ದು, ಬೇರೆ ಬೇರೆ ಪಕ್ಷಗಳಿಂದ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದಾರೆ ಎಂದು ತಿಳಿಸಿದರು.

ವಿಧಾನ ಸಭೆಯಲ್ಲಿ ಪಾಕಿಸ್ತಾನಕ್ಕೆ ಜೈಕಾರ ಕೂಗುವ ದೇಶದ್ರೋಹಿಗಳನ್ನು ರಕ್ಷಣೆ ಮಾಡುವ ಕೆಲಸ ಕಾಂಗ್ರೆಸ್ ನಿಂದ ನಡೆಯುತ್ತಿದ್ದು, ಜನತೆ ಆತಂಕದಲ್ಲಿರುವಂತಾಗಿದೆ.

ಹುಬ್ಬಳ್ಳಿ ಘಟನೆಯ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳು ನೀಡಿದ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ವೈಯಕ್ತಿಕ ಕಾರಣಾಕ್ಕಾಗಿ ಕೊಲೆ ನಡೆದಿದೆ ಎಂದಾದರೆ ರಾಜ್ಯದಲ್ಲಿ ಯಾರು ಯಾರನ್ನು ‌ಕೊಲೆ ಮಾಡಬಹುದಾ? ಎಂದು ಪ್ರಶ್ನಿಸಿದರು. ಇದೊಂದು ರೀತಿಯಲ್ಲಿ ಪರೋಕ್ಷವಾಗಿ ಅಲ್ಪಸಂಖ್ಯಾತರ ರಕ್ಷಣೆ ಕಾರ್ಯವಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರ ಬಗ್ಗೆ ಒಲವು ತೋರಿಸುವ ತುಷ್ಟೀಕರಣದ ನೀತಿ ಅನುಸರಿಸುತ್ತಿದೆ ಎಂದ ಅವರು, ಪ್ರತಿ ಹಂತದಲ್ಲಿ ಕೊಲೆಗಡುಕರನ್ನು ರಕ್ಷಣೆ ಮಾಡುವ ಕಾಂಗ್ರೇಸ್ ಮನಸ್ಥಿತಿಯಿಂದ ರಾಜ್ಯದಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿದೆ ಎಂದು ಆರೋಪ ಮಾಡಿದರು. ಕಾಂಗ್ರೆಸ್ ನ ನೀಚ ಮನಸ್ಥಿತಿಯ ಆಡಳಿತದಿಂದ ಮನೆಯಿಂದ ಹೊರಗೆ ಹೋದ ಹೆಣ್ಮಕ್ಕಳು ಸಂಜೆ ಸುರಕ್ಷಿತವಾಗಿ ಮನೆಗೆ ಸೇರುತ್ತಾರಾ? ಎಂಬ ಹೆದರಿಕೆ ರಾಜ್ಯದ ಜನತೆಯಲ್ಲಿ ‌ಕಾಡುತ್ತಿದೆ ಎಂದು ತಿಳಿಸಿದರು.

ಯಡಿಯೂರಪ್ಪ ಹಾಗೂ ಅವಿಭಜಿತ ದ.ಕ.ಜಿಲ್ಲೆಗೆ ಅವಿನಾಭಾವ ಸಂಬಂಧವಿದ್ದು, ಹಿಂದುತ್ವದ ತವರೂರು ದ.ಕ.ಜಿಲ್ಲೆಯವರಿಗೆ ಮತ್ತೆ ಹಿಂದುತ್ವದ ಪಾಠವನ್ನು ‌ತಿಳಿಸಿಕೊಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಸ್ವತಂತ್ರ ಭಾರತದಲ್ಲಿ ಈ ಬಾರಿಯ ಚುನಾವಣೆ ಅತ್ಯಂತ ವಿಶೇಷ ಚುನಾವಣೆಯಾಗಿದೆ. ನರೇಂದ್ರ ಮೋದಿಯವರು ಕಳೆದ 10 ವರ್ಷಗಳಲ್ಲಿ ಭಾರತವನ್ನು ಬೆಳೆಸಿಕೊಂಡ ರೀತಿ ಅದ್ಭುತವಾಗಿದೆ.

ಭಯದ ವಾತವರಣದಲ್ಲಿ ಬದುಕುವ ಸ್ಥಿತಿಯನ್ನು ಹೋಗಲಾಡಿಸಿ, ಭಯಮುಕ್ತ, ಲಂಚ ಮುಕ್ತ, ಸಮೃದ್ದ ಭಾರತವಾಗುವಲ್ಲಿ ಮೋದಿಯವರು ಕಾರಣರಾಗಿದ್ದಾರೆ. ಮೋದಿಯವರ ಇಚ್ಚಾಶಕ್ತಿ, ನಾವು ನೀಡಿದ ಶಕ್ತಿಯನ್ನು ಬಳಸಿಕೊಂಡು ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮನ ಮಂದಿರ ನಿರ್ಮಾಣವಾಗಿದೆ. ರಾಷ್ಟ್ರ ವಿರೋಧಿ ಮಾನಸಿಕತೆಯ ವಿರುದ್ದ ಹೋರಾಟ ನಿರಂತರವಾಗಲಿದ್ದು, ಎ.26 ರಂದು ಚುನಾವಣೆ ‌ನಡೆಯುವವರೆಗೂ ಬಿಜೆಪಿಯ ವಿಚಾರವನ್ನು ಪ್ರತಿ ಮನ, ಮನೆಗೂ ತಿಳಿಸುವ ಕಾರ್ಯ ಮಾಡಿ. ಕರ್ನಾಟಕದಲ್ಲಿ 28 ಕ್ಕೆ 28 ಸ್ಥಾನಗಳನ್ನು ವಿಜಯೇಂದ್ರ ಅವರ ನೇತೃತ್ವದಲ್ಲಿ ಪಡೆಯುವುದರಲ್ಲಿ ಯಾವುದೇ ಸಂಶಯಬೇಡ .

‌‌ ಹಿರಿಯರ ಆಶ್ರೀರ್ವಾದ, ಕಾರ್ಯಕರ್ತರ ಹರಕೆ, ಹಾರೈಕೆಯ ಮೂಲಕ ಜಿಲ್ಲೆಯ ದೊಡ್ಡ ಜವಾಬ್ದಾರಿಯನ್ನು ನೀಡಿದ್ದೀರಿ. ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಯಾವುದೇ ರೀತಿಯಲ್ಲಿ ಚ್ಯುತಿ ಬರದ ರೀತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಮುಂದಿನ 25 ವರ್ಷಗಳ ಭಾರತೀಯ ಜನತಾಪಾರ್ಟಿಯ ಕಾಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ದೇಶದ ಭದ್ರತೆಗಾಗಿ, ಮುಂದಿನ ಪೀಳಿಗೆಗಾಗಿ ನಡೆಯುವ ಚುನಾವಣೆ ಇದಾಗಿದ್ದು, ಬಹಳಷ್ಟು ಪರಿವರ್ತನೆಗಳಿಗೆ ಕಾರಣವಾಗುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ‌ಮನವಿ ಮಾಡಿದರು.

ಶಾಸಕನಾಗಲು ನನಗೆ ನೀಡಿದ ಮತಗಳಿಗಿಂತ ಹೆಚ್ಚು ಮತಗಳನ್ನು ಕ್ಯಾ.ಬ್ರಿಜೇಶ್ ಚೌಟರಿಗೆ ನೀಡಿ ಎಂದು ಮನವಿ ಮಾಡಿದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ನ ದುರಾಡಳಿತದ ಕಾರಣದಿಂದಾಗಿ ಕೊಲೆಗಳು, ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪ ಮಾಡಿದರು. ಜಾತಿ ಹೆಸರಿನಲ್ಲಿ ಒಡೆಯುವ ಪ್ರಯತ್ನ ಕಾಂಗ್ರೇಸ್ ಮಾಡುತ್ತಿದ್ದು, ಕಾರ್ಯಕರ್ತರ ಶಕ್ತಿಯ ಮುಂದೆ ವಿರೋಧಿಗಳ ಯಾವ ಕುತಂತ್ರವೂ ನಡೆಯುವುದಿಲ್ಲ ಎಂದು ಭರವಸೆ ನೀಡಿದರು.

‌ ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ ಮಾತನಾಡಿ, ಒಂದು ಜಾತಿ, ಒಂದು ಮತ, ಪಂಥಕ್ಕೆ ನಡೆಯುವ ಚುನಾವಣೆ ಇದಲ್ಲ, ಬದಲಾಗಿ ರಾಷ್ಟ್ರ ಮಟ್ಟದ ಚುನಾವಣೆ ಇದಾಗಿದ್ದು ಮಹತ್ವದ್ದಾಗಿದೆ. ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿಯವರ ಬಿಜೆಪಿ ಸರಕಾರ ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ,ಇದನ್ನು ಅರ್ಥ ಮಾಡಿಕೊಂಡು ಭವಿಷ್ಯದ ನವ ಭಾರತದ ನಿರ್ಮಾಣಕ್ಕೆ ಮತ್ತೆ ಮೋದಿಯವರು ಪ್ರಧಾನಿಯಾಗಬೇಕಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ತುಷ್ಟೀಕರಣದ ರಾಜಕಾರಣ ನಡೆಯುತ್ತಿದ್ದು, ಇವೆಲ್ಲವನ್ನು‌ ಕೊನೆಗಾಣಿಸಲು ಬಿಜೆಪಿಯ ಅಗತ್ಯವಿದೆ ಎಂದು ತಿಳಿಸಿದರು.

ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಪ್ರಸ್ತುತ ಇರುವುದು ಕಾಂಗ್ರೆಸ್ ನ ಭಾರತವಲ್ಲ, ಹಿಂದುತ್ವದ ಭಾರತ, ಮೋದಿಯವರ ಅದ್ಬುತ ಭಾರತವಾಗಿದೆ, ವಾಜಪೇಯಿ ಅವರು ಕನಸು ಕಂಡಿದ್ದ ವಿಕಸಿತ ಭಾರತ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಮಾರ್ಪಾಡು ಆಗುತ್ತಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ವೈ. ಭರತ್ ಶೆಟ್ಟಿ, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ , ಕೆ.ಪದ್ಮನಾಭ ಕೊಟ್ಟಾರಿ,ಜಿಲ್ಲಾ ಕಾರ್ಯದರ್ಶಿ ಕಿಶೋರ್ ಭಂಡಾರಿ ಪುತ್ತೂರು, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಭಾರಿಗಳಾದ ಜಗದೀಶ ಶೇಣವ, ಪೂಜಾ ಪೈ ಮಂಗಳೂರು ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ,ಜೆ.ಡಿ.ಎಸ್.ಜಿಲ್ಲಾಧ್ಯಕ್ಷ ಅಕ್ಚಿತ್ ಸುವರ್ಣ, ಬಿಜೆಪಿ ಯುವಮೋರ್ಚಾದ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಮತ್ತಿತರರು ಉಪಸ್ಥಿತರಿದ್ದರು.

ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ವಂದಿಸಿದರು.
ಡೊಂಬಯ್ಯ ಅರಳ ಕಾರ್ಯಕ್ರಮ ನಿರೂಪಿಸಿದರು.

ಬಿಜೆಪಿಗೆ ಸೇರ್ಪಡೆ

ಮಂಗಳೂರು ಕಾಂಗ್ರೆಸ್ ಮಹಾನಗರ ಪಾಲಿಕೆ ಸದಸ್ಯೆ ಕವಿತಾಸನಿಲ್ ಹಾಗೂ ಬಂಟ್ವಾಳ ‌ಪುರಸಭಾ ಸದಸ್ಯರಾಗಿರುವ ಗಂಗಾಧರ್ ಪೂಜಾರಿ ಅವರು ಬಿಜೆಪಿಗೆ ಸೇರ್ಪಡೆಯಾದರು.
ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಕ್ಷದ ಧ್ವಜವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಬಿಜೆಪಿಗೆ ಸೇರ್ಪಡೆಯಾದ ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಕವಿತಾಸನಿಲ್ ಮಾತನಾಡಿ, ಮೋದಿಯವರ ತತ್ವಸಿದ್ದಾಂತಗಳನ್ನು ,ಬಿಜೆಪಿಯ ವಿಚಾರಗಳನ್ನು ಒಪ್ಪಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ರಾಜಕೀಯ ಗುರು ಜನಾರ್ದನ ಪೂಜಾರಿ ಅವರ ಆಶ್ರೀರ್ವಾದ ಪಡೆದುಕೊಂಡು ಬಂದಿದ್ದೇನೆ.

ಹುಬ್ಬಳ್ಳಿಯ ಘಟನೆ ನಮಗೆಲ್ಲರಿಗೂ ಬುದ್ದಿಯನ್ನು ಕಲಿಸಿದ್ದು, ಮತ್ತೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕ. ಈ ಬಾರಿಯ ಮತವನ್ನು ಪ್ರಭು ಶ್ರೀರಾಮ ಚಂದ್ರನಿಗೆ ನೀಡಬೇಕು ಎಂದು ಮನವಿ ಮಾಡಿದರು.

22 ವರ್ಷಗಳ ಕಾಲ ರಾಜಕೀಯದಲ್ಲಿ ಪಳಗಿ ಬಂದ ನಾನು ಈ ಬಾರಿಯ ಎರಡು ಅಭ್ಯರ್ಥಿಗಳನ್ನು ತುಲನೆ ಮಾಡಿದಾಗ ದೇಶವನ್ನು ‌ಕಾಯುವ ಸೈನಿಕ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಜಿಲ್ಲೆಯ ಜನತೆ ಲೋಕಸಭೆಗೆ ಆರಿಸಿ ಕಳುಹಿಸಬೇಕಾಗಿದೆ ಅನ್ನಿಸಿದೆ ಎಂದರು.

ಯಾವುದೇ ಆಸೆ,ಆಕಾಂಕ್ಷೆಯಿಲ್ಲದೆ, ಸಾಮಾನ್ಯರಲ್ಲಿ ಸಾಮಾನ್ಯಳಾಗಿ ಪಕ್ಷವನ್ನು ಸಂಘಟಿಸುವಲ್ಲಿ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ.ನಾನೋಬ್ಬಳು ಹಿಂದುವಾಗಿ ಭಾರತೀಯ ಧರ್ಮ ಉಳಿಯಬೇಕು ಎಂಬ ಯೋಚನೆಯಿಂದ ಪಕ್ಷವನ್ನು ಸೇರಿದ್ದೇನೆ ಎಂದು ತಿಳಿಸಿದರು.