ಬಂಟ್ವಾಳ : ಯಾವುದೇ ಒಂದು ಶಾಲೆ ಉಳಿವಿನಲ್ಲಿ ಆ ಶಾಲೆಯ ಪೋಷಕರು ಮತ್ತು ಹಿರಿಯ ವಿದ್ಯಾರ್ಥಿಗಳ ತಂಡ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ರಾಜ್ಯಮಟ್ಟದ ಶಿಕ್ಷಕರತ್ನ ಪ್ರಶಸ್ತಿ ಪುರಸ್ಕೃತ ಮಜಿ ವೀರಕಂಭ ಶಾಲಾ ಶಿಕ್ಷಕಿ ಸಂಗೀತ ಶರ್ಮ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಏಕೈಕ ಸರಕಾರಿ ಪ್ರಾಥಮಿಕ ಶಾಲೆ ಕಾರ್ಲ ಇಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ವತಿಯಿಂದ ಕಾರ್ಲ ಶಾಲಾ ಉಳಿಸಿ ಬೆಳೆಸುವ ದೃಷ್ಟಿಯಲ್ಲಿ ಕರೆದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಶಾಲಾ ಶೈಕ್ಷಣಿಕ ವಿಚಾರಗಳಿಗೆ ಪೂರಕವಾದ ಚಟುವಟಿಕೆಗಳನ್ನು ನಡೆಸುವುದರ ಮೂಲಕ ಶಾಲೆಯ ಏಳಿಗೆಗಾಗಿ ಶ್ರಮಿಸುವಂತಾಗಬೇಕು. ಸರ್ಕಾರಿ ಶಾಲೆಗಳು ಬೆಳೆಯಬೇಕು ಯಾವುದೇ ಕಾರಣಕ್ಕೂ ಮುಚ್ಚಬಾರದು ಮಕ್ಕಳನ್ನು ಆಕರ್ಷಿಸುವ ಹಲವು ಚಟುವಟಿಕೆಗಳನ್ನು ನಡೆಸಿ ಮಕ್ಕಳನ್ನು ತನ್ನತ್ತ ಸೆಳೆಯುವ ಪ್ರಯತ್ನವನ್ನು ಮಾಡಬೇಕು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಾಲಾ ಆವರಣದಲ್ಲಿ ಗಿಡ ನಾಟಿ ಮಾಡಲಾಯಿತು.
ಶಾಲಾ ಹಿರಿಯ ವಿದ್ಯಾರ್ಥಿಗಳು ತಂಡವಾಗಿ ಶಾಲಾ ಅಭಿಮಾನಿಗಳನ್ನು ಜೊತೆ ಸೇರಿಸಿ ಉತ್ತಮ ಚಟುವಟಿಕೆಗಳನ್ನು ಮಾಡಿಸಲು ಎಲ್ಲರೂ ಕೈಜೋಡಿಸಬೇಕು, ಸಮಯ ಸಿಕ್ಕಾಗಲೆಲ್ಲಾ ಶಾಲಾ ಅಭಿವೃದ್ಧಿಯ ಕೆಲಸಗಳಲ್ಲಿ ತೊಡಗಿ ಕೊಳ್ಳುವಂತಾಗಬೇಕು ಎಂಬುದಾಗಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರವೀಣ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ತಿಮ್ಮಪ್ಪ ಕೆ. ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದ ಬಳಿಕ ಮಗುವಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರವೂ ಮಹತ್ತರವಾಗಿರುತ್ತದೆ ಶಿಕ್ಷಕರ ಜೊತೆಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು ಮತ್ತು ಶಾಲೆಗೆ ಅಗತ್ಯವಿರುವ ಬೌದ್ಧಿಕ ಅಭೀವೃದ್ದಿಗೆ ಜೊತೆಯಾಗಬೇಕು ಎಂಬುದಾಗಿ ಮನವಿ ಮಾಡಿದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಜಾನಕಿ ಪ್ರಸ್ತುತ ಶಾಲಾ ಸ್ಥಿತಿ ಗತಿಗಳನ್ನು ವಿವರಿಸಿ ಶಾಲಾಗೆ ಬೇಕಾದ ಅವಶ್ಯಕತೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಪೆರ್ನೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಭಾರತಿ , ಸದಸ್ಯರಾದ ವನಿತಾ , ಮುತ್ತಪ್ಪ ಸಾಲಿಯಾನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವ ಪ್ರತಿನಿಧಿಗಳಾದ ಶಶಿಕಲಾ,ತ್ರಿವೇಣಿ, ಶಾಲಾ ಹಿರಿಯ ವಿದ್ಯಾರ್ಥಿಗಳು, ಶಾಲಾಭಿಮಾನಿಗಳು, ಮಕ್ಕಳ ಪೋಷಕರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಸಹ ಶಿಕ್ಷಕಿ ಯಶೋಧ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಾಲಾ ಆವರಣದಲ್ಲಿ ಗಿಡ ನಾಟಿ ಮಾಡಲಾಯಿತು.